ನಮ್ಮ ಮೆಟ್ರೋದಲ್ಲಿ ಹೃದಯಾಘಾತವಾಗಿ ವ್ಯಕ್ತಿ ಸಾವು; ಬಿಎಂಆರ್​ಸಿಎಲ್ ವಿರುದ್ಧ ಎಫ್​ಐಆರ್ ದಾಖಲು

ಬೆಂಗಳೂರು, ಜುಲೈ 26: ಕೋಟಿ ಕೋಟಿ ಹಣ ಖರ್ಚು ಮಾಡಿ ನಿರ್ಮಿಸಿರುವ ಮೆಟ್ರೋದಲ್ಲಿ ಪ್ರಯಾಣಿಕನಿಗೇನಾದ್ರು ಆರೋಗ್ಯದಲ್ಲಿ ಹೆಚ್ಚುಕಮ್ಮಿಯಾದ್ರೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಏಕೆಂದರೆ ಇಂದು ನಮ್ಮ ಮೆಟ್ರೋದಲ್ಲಿ ನಡೆದ ಘಟನೆ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಹೃದಯಾಘಾತವಾಗಿದ್ದು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಿಫಲವಾದ ಆರೋಪದ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಕುರಿತು ಉತ್ತರ ನೀಡುವಂತೆ ಬೈಯಪ್ಪನಹಳ್ಳಿ ಪೊಲೀಸರು ಬಿಎಂಆರ್‌ಸಿಎಲ್ ಮುಖ್ಯ ಭದ್ರತಾ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದ ತಿಮ್ಮೇಗೌಡ(67) ಎಂಬುವವರಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ತಲುಪುವ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಕೊನೆಗೆ ಮೆಟ್ರೋ ರೈಲು ಎಂಜಿ ರಸ್ತೆ ನಿಲ್ದಾಣಕ್ಕೆ ಬಂದಾಗ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದ್ದು ಮೆಟ್ರೋ ರೈಲಿನಿಂದ ಹೊರಗೆ ಕರೆತಂದು ಫ್ಲಾಟ್ ಫಾರಂ ಮೇಲೆ ಕೂರಿಸಿದ್ದಾರೆ. ಸುಮಾರು ಹದಿನಾಲ್ಕು ನಿಮಿಷಗಳ ಕಾಲ ಫ್ಲಾಟ್ ಫಾರಂನಲ್ಲೇ ತಿಮ್ಮೇಗೌಡರನ್ನು ಹಾಗೇ ಬಿಟ್ಟಿದ್ದಾರೆ. ಅಲ್ಲಿನ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿಲ್ಲ. ಕೆಲ ನಿಮಿಷದ ನಂತರ ತಿಮ್ಮೇಗೌಡರನ್ನು ಇನ್ಫ್ರಾಂಟ್ರಿ ರಸ್ತೆಯ ಸ್ಪರ್ಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸದ ಕಾರಣ ತಿಮ್ಮೇಗೌಡರ ಪ್ರಾಣ ಪಕ್ಷ ಹಾಕಿಹೋಗಿದೆ. ಇಲ್ಲಿ ಮೆಟ್ರೋ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.