ತುಮಕೂರಿನಲ್ಲಿ ಮೌಢ್ಯಕ್ಕೆ 1 ತಿಂಗಳ ಹಸುಗೂಸು ಬಲಿ, ಮೌಢ್ಯಕ್ಕೆ ಕೊನೆಯೆಂದು?

ತುಮಕೂರು, ಜುಲೈ 26: ಜಿಲ್ಲೆಯ ಗೊಲ್ಲರಹಟ್ಟಿಯಲ್ಲಿ ಮೂಢನಂಬಿಕೆಯಲ್ಲಿ ಮುಳುಗಿದ್ದ ಕುಟುಂಬಸ್ಥರಿಂದ ಬಾಣಂತಿ, ಮಗುವನ್ನ ಊರ ಹೊರಗಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಪರೀತ ಶೀತದಿಂದ ಬಳಲಿ ಮಗು ಮೃತಪಟ್ಟಿದೆ. ತುಮಕೂರು ತಾಲೂಕಿನ ಮಲ್ಲೇನಹಳ್ಳಿ ವ್ಯಾಪ್ತಿಯ ಗೊಲ್ಲರಹಟ್ಟಿಯಲ್ಲಿ ಮೌಢ್ಯಕ್ಕೆ 1 ತಿಂಗಳ ಮಗು ಬಲಿಯಾಗಿದೆ. ದೇವರಿಗೆ ಸೂತಕ ಆಗುತ್ತೆ ಎಂದು ಬಾಣಂತಿ, ಮಗುವನ್ನು ಊರಿನ ಹೊರಗೆ ಗುಡಿಸಲಲ್ಲಿಟಲಾಗಿತ್ತು. ಮಗುವಿಗೆ ವಿಪರೀತ ಶೀತವಾಗಿದ್ದು ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಸಂಜೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಕುಟುಂಬಸ್ಥರ ಮೂಢನಂಬಿಕೆಗೆ 1 ತಿಂಗಳ ಕಂದಮ್ಮ ಸಾವನ್ನಪ್ಪಿದೆ.

ಕಾಡುಗೊಲ್ಲ ಸಮುದಾಯದ ಸೂತಕದ ಸಂಪ್ರದಾಯ ಆಚರಣೆ ಈ ಕಾಲದಲ್ಲೂ ಮುಂದುವರೆದಿದೆ. ತುಮಕೂರು ತಾಲೂಕು ಮಲ್ಲೇನಹಳ್ಳಿ ಗೊಲ್ಲರಹಟ್ಟಿಯ ವಸಂತಾ ಅನ್ನೋ ಬಾಣಂತಿ ಹಾಗೂ ನವಜಾತ ಶಿಶುವನ್ನು ಊರಿನಿಂದ ಹೊರಗಿಟ್ಟು ಊರಾಚೆಯ ಜಮೀನಿನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಗುಡಿಸಿಲಿನಲ್ಲಿ ಏಕಾಂಗಿಯಾಗಿ ವಾಸ ಮಾಡುವಂತೆ ಕಟ್ಟಪ್ಪಣೆ ಮಾಡಿತ್ತು. ಸಂಪ್ರದಾಯದ ಹೆಸರಿನಲ್ಲಿ ತಾಯಿ, ಮಗುವಿನ ಜೀವಕ್ಕೆ ಕುತ್ತು ತರುವಂತಾ ಮೌಡ್ಯಾಚರಣೆ ಮಾಡಲಾಗಿತ್ತಿ. ಆದ್ರೆ ಈಗ ಮಗುವಿಗೆ ವಿಪರೀತ ಶಿತವಾಗಿ ಪುಟ್ಟ ಕಂದಮ್ಮ ಪ್ರಾಣ ಕಳೆದುಕೊಂಡಿದೆ. ತಾಯಿ ಒಡಲ ಆಕ್ರಂದನ ಮುಗಿಲು ಮುಟ್ಟಿದೆ.

ವಸಂತ ಎಂಬ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ ಆಕೆಯ ಕುಟುಂಬಸ್ಥರು ಊರಾಚೆಗಿನ ಗುಡಿಸಿಲಿನಲ್ಲಿ ವಾಸಿಸುವಂತೆ ಅಪ್ಪಣ ಮಾಡಿದ್ದರು. ಅವರ ಮಾತನ್ನು ಮೀರದ ವಸಂತ ಈಗ ಕಂದಮ್ಮನನ್ನು ಕಳೆದುಕೊಂಡಿದ್ದಾರೆ. ವಸಂತ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅವಳಿ‌ ಶಿಶುವಿಗೆ ಜನ್ಮ ನೀಡಿದ್ದರು. ಹೆರಿಗೆ ಸಂದರ್ಭದಲ್ಲಿ ಗಂಡು‌ ಮಗು ಸಾವನ್ನಪ್ಪಿದ್ದು, ಹೆಣ್ಣು ಮಗು ಆರೋಗ್ಯವಂತವಾಗಿತ್ತು. ಹೆರಿಗೆ ಮುಗಿಸಿ ವಾಪಸ್ ಬಂದ ವಸಂತ ಮನೆಗೆ ತೆರಳದೇ ಊರು ಹೊರಗಿನ ಗುಡಿಸಲಿನಲ್ಲಿ ತನ್ನ ಚೊಚ್ಚಲ ಬಾಣಂತನ ಆರಂಭಿಸಿದ್ದರು. ನಮ್ಮ ದೇವರಿಗೆ ಸೂತಕ ಆಗಲ್ಲ ಹಾಗಾಗಿ ನಾವು ಒಳಗೆ ಬಿಟ್ಟುಕೊಳ್ಳುವುದಿಲ್ಲ, ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು. ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಆಗಲ್ಲ, ಹಿಂದಿನಿಂದಲೂ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದ್ದರು. ಈ ಬಗ್ಗೆ ಹಿಂದೆ ವರದಿ ಮಾಡಿತ್ತು.

ಆದರೆ ಈಗ ಈ ಮೂಢನಂಬಿಕೆಗೆ ಜಗತ್ತು ಕಾಣದ ಮಗು ಕಣ್ಣುಮುಚ್ಚಿದೆ. ತನ್ನ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ತಾಯಿ ಕಣ್ನೀರಲ್ಲಿ ಕೈಗೊಳೆಯುತ್ತಿದ್ದಾರೆ. ಈಗಲಾದರೂ ಮೂಢನಂಬಿಕೆಯ ಭೂತ ದೂರವಾಗಬೇಕು. ಬಾಲಕಿಯರು ಋತುಮತಿಯಾದಾಗ,ಮಹಿಳೆಯರ ಮಾಸಿಕ ಋತುಚಕ್ರ ಮತ್ತು ಹೆರಿಗೆ ಸಂದರ್ಭದಲ್ಲಿ ನಿರ್ದಿಷ್ಟ ದಿನಗಳವರೆಗೆ ಗ್ರಾಮದಿಂದ ಹೊರಗೆ ಗುಡಿಸಲಿನಲ್ಲಿ ಇರುವ ಪದ್ಧತಿ ಬುಡಕಟ್ಟು ಸಂಪ್ರದಾಯ ಪಾಲಿಸುವ ಗೊಲ್ಲ ಸಮುದಾಯದಲ್ಲಿ ಬಹಳ ಹಿಂದಿನಿಂದಲ್ಲೂ ನಡೆದುಕೊಂಡು ಬಂದಿದೆ. ಈ ಪದ್ಧತಿ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇನ್ನಾದರೂ ಜನ ಬದಲಾಗಬೇಕು.