ನಿರಂತರ ಮಳೆಯಿಂದ ಅವಘಡ: ಚಿಕ್ಕಮಗಳೂರಲ್ಲಿ ವೃದ್ಧೆ ಸಾವು

ಚಿಕ್ಕಮಗಳೂರು: ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದ 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಮಳೆ ಸಂಬಂಧಿ ಅವಘಡಗಳಿಂದ ಜನರು ಬಲಿಯಾಗುತ್ತಿದ್ದಾರೆ. ಅಧಿಕ ಮಳೆಯಿಂದ ಮುಳುಗಡೆಯಾದ ಅಡಿಕೆ ತೋಟ ನೋಡಲು ಹೋದ ವೃದ್ಧೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಹೊಸಸಿದ್ರಳ್ಳಿ ಗ್ರಾಮದಲ್ಲಿ ನಡೆದಿದೆ. ಹೊಸಸಿದ್ರಳ್ಳಿ ಗ್ರಾಮದ ರಾಮಮ್ಮ (65) ಮೃತ ವೃದ್ಧೆ. ರಾಮಮ್ಮ ನಿನ್ನೆ (ಜು.25) ಸಂಜೆ ಮುಳುಗಡೆಯಾಗಿದ್ದ ತಮ್ಮ ಅಡಿಕೆ ತೋಟ ನೋಡಲು ಹೋಗಿದ್ದರು. ಹೀಗೆ ಹೋದ ರಾಮಮ್ಮ ಮರಳಿ ಬಾರದ ಹಿನ್ನೆಲೆ ಕುಟುಂಬಸ್ಥರು ರಾಮಮ್ಮ ಅವರನ್ನು ಹುಡುಕಿದ್ದಾರೆ.

ಹೀಗೆ ಹುಡುಕುತ್ತಾ ತಾಯಿಹಳ್ಳದ ಬಳಿ ಬಂದಾಗ ರಾಮಮ್ಮ ಅವರ ಚಪ್ಪಲಿ ಉರುಗೋಲು ಪತ್ತೆಯಾಗಿದೆ. ಕೂಡಲೆ ಅಗ್ನಿಶಾಮಕ ದಳ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದಾಗ ರಾಮಮ್ಮ ಅವರ ಶವ ಪತ್ತೆಯಾಗಿದೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.