ಕಲಬುರಗಿ, ಜು.26: ಕಳೆದ ಜೂನ್ 19 ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾಗರಾಣಿ ಬಳಿಯಿರುವ ಭೀಮಾ ನದಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ಬಗ್ಗೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶವ ಸಿಕ್ಕ ನಂತರ ಅದು ಕಲಬುರಗಿ ನಗರದ ಕಮಲಾನಗರದ ನಿವಾಸಿಯಾಗಿದ್ದ 17 ವರ್ಷದ ಶಿವಕುಮಾರ್ ಎಂಬ ಕಾಲೇಜು ವಿದ್ಯಾರ್ಥಿಯದ್ದು ಎಂದು ಗೊತ್ತಾಗಿದೆ. ಮೃತ ಶಿವಕುಮಾರ್, ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಕಾಮರ್ಸ್ ಓದುತ್ತಿದ್ದ. ಕೆಲ ದಿನಗಳ ಹಿಂದಷ್ಟೇ ಕಾಲೇಜಿಗೆ ಪ್ರವೇಶ ಪಡೆದಿದ್ದ. ಆದ್ರೆ, ಜೂನ್ 18 ರಂದು ಅಮವಾಸ್ಯೆಯ ದಿನ, ಶಿವಕಮಾರ್ನನ್ನು ಆತನ ಸ್ನೇಹಿತರು, ಅಮವಾಸ್ಯೆಯಾಗಿದ್ದರಿಂದ ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಹೇಳಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದರು.
ತನಿಖೆ ಬಳಿಕ ಕೊಲೆ ಎಂಬುದು ಬೆಳಕಿಗೆ
ದೇವಸ್ಥಾನಕ್ಕೆಂದು ಶಿವಕುಮಾರ್ನನ್ನ ಕರೆದುಕೊಂಡು ಹೋಗಿದ್ದ ಸ್ನೇಹಿತರು ಸಂಜೆ ಮರಳಿ ಮನೆಗೆ ಬಂದರೂ ಕೂಡಾ ಶಿವಕುಮಾರ್ ಮಾತ್ರ ಬಂದಿರಲಿಲ್ಲ. ಈ ಬಗ್ಗೆ ಶಿವಕುಮಾರ್ ಜೊತೆ ಹೋಗಿದ್ದವರನ್ನು ಕೇಳಿದ್ರೆ, ನಮಗೆ ಗೊತ್ತಿಲ್ಲ. ಆತ ನಮ್ಮ ಜೊತೆ ಬರಲಿಲ್ಲ. ಕಲಬುರಗಿ ನಗರದ ರಿಂಗ್ ರೋಡ್ನಲ್ಲಿಯೇ ಆತ ಇಳಿದುಕೊಂಡಿದ್ದಾನೆಂದು ಹೇಳಿದ್ದರು. ಆದ್ರೆ, ಈ ಕುರಿತು ಕುಟುಂಬದವರಿಗೆ, ಶಿವಕುಮಾರ್ ಜೊತೆ ಹೋಗಿದ್ದ ಯುವಕರ ಬಗ್ಗೆ ಅನುಮಾನವಿತ್ತು. ಹೀಗಾಗಿ ನಮ್ಮ ಪುತ್ರನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಶಿವಕುಮಾರ್ನದ್ದು ಸಹಜ ಸಾವಲ್ಲ, ಬದಲಾಗಿ ಕೊಲೆ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ. ಹೌದು ಕೊಲೆ ಮಾಡಿದ್ದು ಆತನ ಸ್ನೇಹಿತರೇ ಎಂಬುದು ಗೊತ್ತಾಗಿದ್ದು, ಶಿವಕುಮಾರ್ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳಾದ ಶರಣು ಮತ್ತು ಲಿಂಗರಾಜ್ನನ್ನ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟ ಹಣ ಮರಳಿ ಕೇಳಿದಕ್ಕೆ ಸ್ನೇಹಿತರಿಂದಲೇ ಕೊಲೆ
ಇನ್ನು ಒಂದೇ ಬಡಾವಣೆಯಲ್ಲಿದ್ದ ಇವರೆಲ್ಲ ಕಳೆದ ಅನೇಕ ವರ್ಷಗಳಿಂದ ಸ್ನೇಹಿತರು. ಕೊಲೆಯಾಗಿರುವ ಶಿವಕುಮಾರ್ ಮಾತ್ರ ಕಾಲೇಜಿಗೆ ಹೋಗಿದ್ದರೆ, ಇನ್ನುಳಿದವರು ಆಟೋ ಓಡಿಸಿಕೊಂಡು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರಂತೆ. ಇನ್ನು ಶಿವಕುಮಾರ್ ಕೊಲೆಗೆ ಕಾರಣವಾಗಿದ್ದು ಹಣಕಾಸಿನ ವಿಚಾರ. ಹೌದು ಕೊಲೆಯಾಗಿರುವ ಶಿವಕುಮಾರ್, ಕೆಲ ತಿಂಗಳ ಹಿಂದೆ ಆರೋಪಿಗಳಿಗೆ 2 ಸಾವಿರ ಹಣ ನೀಡಿದ್ದನಂತೆ. ತಾನು ಕೊಟ್ಟ ಹಣವನ್ನು ಮರಳಿ ನೀಡುವಂತೆ ಕೇಳಿದ್ದನಂತೆ. ಅಷ್ಟೇ ಹಣ ಕೇಳಿದ್ದಕ್ಕೆ ದುಷ್ಕರ್ಮಿಗಳು, ಕಳೆದ ಜೂನ್ 18 ರಂದು ಅಮವಾಸ್ಯೆ ದಿನ ದೇವಸ್ಥಾನಕ್ಕೆ ಹೋಗೋಣವೆಂದು ಹೇಳಿ ಆಟೋದಲ್ಲಿ ಕರೆದುಕೊಂಡು ಹೋಗಿ, ಭೀಮಾ ನದಿಯಲ್ಲಿ ಆತನಿಗೆ ಥಳಿಸಿ, ನಂತರ ಆತನನ್ನು ನೀರಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ.
ಶಿವಕುಮಾರ್ ಸ್ನೇಹಿತರು ಸರಿಯಿಲ್ಲ ಎನ್ನುವುದು ಶಿವಕುಮಾರ್ ಕುಟುಂಬದವರಿಗೆ ಕೂಡ ಗೊತ್ತಾಗಿತ್ತಂತೆ. ಹೀಗಾಗಿಯೇ ತಮ್ಮ ಮನೆಕಡೆ ಬರದಂತೆ ಅನೇಕ ಬಾರಿ ಹೇಳಿದ್ದರಂತೆ. ಆದ್ರೆ, ಶಿವಕುಮಾರ್ ಬೆನ್ನುಬಿದ್ದಿದ್ದ ದುಷ್ಕರ್ಮಿಗಳು, ನಂಬಿಸಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಸ್ನೇಹಿತರಿಂದಲೇ ಕಾಲೇಜು ವಿದ್ಯಾರ್ಥಿ ಕೊಲೆಯಾಗಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.