ಕಾರ್ಗಿಲ್ ವಿಜಯ ದಿವಸವು ಭಾರತದ ಪ್ರತಿಯೊಬ್ಬ ಪ್ರಜೆಗೂ ಮಹತ್ವದ ದಿನ. 1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ಸಂಭ್ರಮಾಚರಣೆಗಾಗಿ ಹಾಗೂ ಭಾರತೀಯ ಸೈನಿಕರ ತ್ಯಾಗ ಮತ್ತು ಶೌರ್ಯವನ್ನು ಗೌರವಿಸಲು ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಿಣ ರೇಖೆಯ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ಅಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಸೈನಿಕರನ್ನು ಹೊರಹಾಕುವ ಮೂಲಕ ಆಪರೇಷನ್ ವಿಜಯ್ ಕಾರ್ಯಾಚರಣೆಯಡಿಯಲ್ಲಿ ಪ್ರಸಿದ್ಧ ಟೈಗರ್ ಹಿಲ್ ಮತ್ತು ಇತರ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಯುದ್ಧದಲ್ಲಿ ಅಭೂತಪೂರ್ವವಾದ ವಿಜಯವನ್ನು ಸಾಧಿಸಿತು. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಡೀ ದೇಶವೇ ನೆಮ್ಮದಿಯಿಂದ ಇರಬೇಕಾದರೆ ಭಾರತೀಯ ಸೈನಿಕರು ಮಾತ್ರ ತಮ್ಮ ಮಾತೃಭೂಮಿಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದರು. ಅಂತಹ ವೀರ ಯೋಧರಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಕೂಡಾ ಒಬ್ಬರು. ತನ್ನ ಶೌರ್ಯ ಪ್ರರಾಕ್ರಮದಿಂದ ಶೇರ್ ಷಾ ಅಂತಾನೇ ಕರೆಯಲ್ಪಟ್ಟ ಬಾತ್ರಾ ಅವರ ಶೌರ್ಯದ ಕಥೆ ಇಲ್ಲಿದೆ.
ಸಪ್ಟೆಂಬರ್ 9, 1974 ರಂದು ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಜನಿಸಿದ ವಿಕ್ರಮ್ ಬಾತ್ರಾ ಬಾಲ್ಯದಿಂದಲೂ ಪ್ರತಿಭಾವಂತ ಮತ್ತು ಅತ್ಯುತ್ತಮ ಕ್ರೀಡಾಪಟು. ಅಲ್ಲದೆ ಅವರು ಟೇಬಲ್ ಟೆನ್ನಿಸ್ ನ ರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದರು. ಅವರು ಸಿ.ಡಿ.ಸ್ ಪರೀಕ್ಷೇಯಲ್ಲಿ ಉತ್ತೀರ್ಣರಾದ ಬಳಿಕ ಡಿಸೆಂಬರ್ 6, 1997 ರಲ್ಲಿ ಭಾರತೀಯ ಸೈನ್ಯದಲ್ಲಿ ಸೇವಾ ಜೀವನವನ್ನು ಆರಂಭಿಸಿದರು. ಅವರನ್ನು ಭಾರತೀಯ ಸೇನೆಯ ಜಮ್ಮು ಮತ್ತು ಕಾಶ್ಮೀರ ರೆಫಲ್ಸ್ ನ 13ನೇ ಬೆಟಾಲಿಯನ್ ಆಗಿ ನಿಯೋಜಿಸಲಾಯಿತು. ಎರಡು ವರ್ಷಗಳ ನಂತರ, 1999 ರಲ್ಲಿ ಅವರು ಕಾರ್ಗಿಲ್ ಯುದ್ಧದ ಭಾಗವಾದರು. ಅವರು ತಮ್ಮ ಸೇನಾ ಕಾರ್ಯಾಚರಣೆಯ ಮೂಲಕ ಪಾಕ್ ಸೇನೆ ಮತ್ತು ಭಯೋತ್ಪಾದಕರಲ್ಲಿ ಭಯ ಹುಟ್ಟಿಸಿದ ವೀರ ಸೈನಿಕ. ಅದಕ್ಕಾಗಿಯೇ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರಿಗೆ ಶೇರ್ ಷಾ ಎಂಬ ಬಿರುದನ್ನು ನೀಡಲಾಯಿತು. ಯುದ್ಧ ಭೂಮಿಯಲ್ಲಿ ಶತ್ರುಗಳ ಬೆವರಿಳಿಸುವಂತೆ ಮಾಡಿದ ಬಾತ್ರಾರಿಗೆ ಆಗ ಕೇವಲ 24 ವಷ ವಯಸ್ಸು.
ಮೇ 1999ರಲ್ಲಿ ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ, ಬಾತ್ರಾ ಮತ್ತು ಅವರ ತಂಡವನ್ನು ಜೂನ್ 6 ರಂದು ಡ್ರಾಸ್ ಸೆಕ್ಟರ್ಗೆ ಕಳುಹಿಸಲಾಯಿತು. ಬಾತ್ರಾ ಮತ್ತು ತಂಡಕ್ಕೆ ಪಾಕಿಸ್ತಾನಿ ನುಸುಳುಕೋರರು ಆಕ್ರಮಿಸಿಕೊಂಡಿದ್ದ ಟೊಲೊಲಿಂಗ್ ಶಿಖರವನ್ನು ಮರಳಿ ಪಡೆಯುವುದು ಈ ತಂಡದ ಗುರಿಯಾಗಿತ್ತು. ಆದರೆ ಶಿಖರವನ್ನೇರಿ ಅದನ್ನು ಪಡೆಯುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಜೂನ್ 20ರಂದು ಬಾತ್ರಾ ಮತ್ತು ಅವರ ತಂಡವು ಟೋಲೋಲಿಂಗ್ ನಿಂದ ಉತ್ತರಕ್ಕೆ 1600 ಮೀಟರ್ಗಳಷ್ಟು ಎತ್ತರದಲ್ಲಿರುವ ಪೀಕ್ 5140 ಎಂದು ಕರೆಯಲ್ಪಡುವ ಶಿಖರವನ್ನು ಏರಿದರು. ಈ ಪ್ರದೇಶ ಸಮುದ್ರ ಮಟ್ಟಕ್ಕಿಂತ 5000 ಮೀಟರ್ಗಿಂತಲೂ ಎತ್ತರದಲ್ಲಿದೆ. ಇಲ್ಲಿ ಕ್ಯಾಪ್ಟನ ವಿಕ್ರಮ್ ಬಾತ್ರಾ ಮತ್ತು ತಂಡವು ತಮ್ಮ ಅತ್ಯತ್ತಮ ಕಾರ್ಯತಂತ್ರ ಹಾಗೂ ಶೌರ್ಯದಿಂದ ಶತ್ರುಗಳೊಂದಿಗೆ ಹೋರಾಡಿ ಶಿಖರವನ್ನು ಪುನಃ ವಶಪಡಿಸಿಕೊಂಡರು. ಈ ವಿಜಯದ ನಂತರ ಬಾತ್ರಾ ಅವರು ಬೇಸ್ ಕ್ಯಾಂಪ್ಗೆ ಹಿಂತಿರುಗಿದ ಬಳಿಕ ತಮ್ಮ ಕಮಾಂಡರ್ಗೆ ಯೇ ದಿಲ್ ಮಾಂಗೆ ಮೋರ್ ಎಂದು ಹುಮ್ಮಸ್ಸಿನಿಂದ ಹೇಳಿದರು.
ತಾಯ್ನಾಡು ಮತ್ತು ತನ್ನ ಸ್ನೇಹಿತನ್ನು ಉಳಿಸಲು ಶತ್ರುಗಳ ದಾಳಿಗೆ ಬಾತ್ರಾ ಬಲಿಯಾದರು:
ಟೊಲೊಲಿಂಗ್ ಶಿಖರವನ್ನು ವಶಪಡಿಸಿಕೊಂಡ ನಂತರ ಇವರ ಮುಂದಿನ ಕಾರ್ಯಾಚರಣೆಯು ಮುಸ್ಕೋ ಕಣಿವೆಯಿಂದ ಶತ್ರುಗಳನ್ನು ಓಡಿಸುವುದು. ಇದನ್ನು ಪೀಕ್ 4875 ಎಂದೂ ಕರೆಯುತ್ತಾರೆ. ಇದು ಭಾರತೀಯ ಸೇನೆಯು ಪ್ರಯತ್ನಿಸಿದ ಅತ್ಯಂತ ಕಷ್ಟಕರವಾದ ಕಾರ್ಯಾಚರಣೆಯಲ್ಲಿ ಒಂದಾಗಿದೆ. ಈ ಕಾರ್ಯಾಚರಣೆಯಲ್ಲಿ ಬಾತ್ರಾ ಅವರೊಂದಿಗೆ ಲೆಫ್ಟಿನೆಂಟ್ ಅನುಜ್ ನಾಯರ್ ಮತ್ತು ಲೆಫ್ಟಿನೆಂಟ್ ನವೀನ್ ಇದ್ದರು. ಜುಲೈ 7ರಂದು ಮೆಷಿನ್ ಗನ್ ಬಳಸಿ ಭೀಕರ ಯುದ್ಧ ನಡೆಯಿತು. ಬಾತ್ರಾ ಮತ್ತು ಅವರ ತಂಡ ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡರು. ಆದರೆ ಎದೆಗುಂದದೆ ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಹೋರಾಟವನ್ನು ಮುಂದುವರೆಸಿದರು. ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ನವೀನ್ ಕಾಲಿಗೆ ಗುಂಡು ತಗುಲಿದಾಗ, ವಿಕ್ರಮ್ ಬಾತ್ರಾ ಅವರನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ಶತ್ರುಗಳ ದಾಳಿಗೆ ಬಾತ್ರಾ ಬಲಿಯಾದರು ಮತ್ತು ಭಾರತಮಾತೆಯ ಈ ಕೆಚ್ಚೆದೆಯ ಪುತ್ರ ದೇಶವನ್ನು ರಕ್ಷಿಸುತ್ತಾ ಜಗತ್ತಿಗೆ ಶಾಶ್ವತತವಾಗಿ ವಿದಾಯ ಹೇಳಿದರು. ಪಾಯಿಂಟ್ 4875 ನ್ನು ವಶಪಡಿಸಿಕೊಂಡ ಗೌರವಾರ್ಥವಾಗಿ ಈ ಶಿಖರಕ್ಕೆ ‘ಬಾತ್ರಾ ಟಾಪ್’ ಎಂದು ಹೆಸರಿಡಲಾಯಿತು. ವಿಕ್ರಮ್ ಬಾತ್ರಾ ಅವರ ಅದಮ್ಯ ಶೌರ್ಯ, ಪರಾಕ್ರಮದ ಗೌರವಾರ್ಥವಾಗಿ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ಮಿಲಿಟರಿ ಗೌರವವಾದ ಪರಮವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿಕ್ರಮ್ ಬಾತ್ರಾರ ಸುಂದರ ಪ್ರೇಮ ಕಥೆ:
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಿಗೂ ಒಂದು ಸುಂದರ ಪ್ರೇಮ ಕಥೆಯಿತ್ತು. ಈ ಪ್ರೇಮಕಥೆಯನ್ನು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ನಟನೆಯ ವಿಕ್ರಮ್ ಬಾತ್ರಾ ಅವರ ಜೀವನಾಧಾರಿತ ಚಲನಚಿತ್ರವಾದ ಶೇರ್ ಷಾ ಚಿತ್ರದಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ಇವರ ಪ್ರೇಮ ಕಥೆ ಶುರುವಾಗಿದ್ದು ಕಾಲೇಜು ಸಮಯದಲ್ಲಿ. ವಿಕ್ರಮ್ ಬಾತ್ರಾ ಮತ್ತು ಡಿಂಪಲ್ ಚೀಮಾ ಅವರು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪರಸ್ಪರ ಭೇಟಿಯಾದರು. ನಂತರ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರೊಡೆಯಿತು. ನಂತರ ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಮೊದಲಿಗೆ ಡಿಂಪಲ್ ಅವರ ಕುಟುಂಬ ಇವರಿಬ್ಬರ ಮದುವೆಗೆ ಒಪ್ಪಲಿಲ್ಲ. ಆದರೂ ತಾನು ವಿಕ್ರಮ್ ಅವರನ್ನೆ ಮದುವೆಯಾಗುವುದಾಗಿ ದೃಢ ನಿರ್ಧಾರವನ್ನು ಮಾಡಿದ್ದರು.
ಕಾರ್ಗಿಲ್ ಯುದ್ಧದ ಬಳಿಕ ಇವರಿಬ್ಬರೂ ವಿವಾಹವಾಗಿ ಸುಂದರ ಜೀವನವನ್ನು ಕಟ್ಟಿಕೊಳ್ಳುವ ಆಸೆಯನ್ನು ಹೊತ್ತಿದ್ದರು. ಆದರೆ ಯುದ್ಧಭೂಮಿಯಲ್ಲಿ ತಾಯಿ ಭಾರತಾಂಬೆಯನ್ನು ಶತ್ರು ಪಡೆಯಿಂದ ರಕ್ಷಿಸುವ ಸಂದರ್ಭದಲ್ಲಿ ಬಾತ್ರಾ ಅವರ ವೀರ ಮರಣವನ್ನಪ್ಪಿದ್ದರು. ಇಂದಿಗೂ ಕೂಡಾ ಡಿಂಪಲ್ ಅವರು ಬೇರೆ ವಿವಾಹವಾಗದೆ ವಿಕ್ರಮ್ ಬಾತ್ರಾ ಅವರ ನೆನಪಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.