ಹುಬ್ಬಳ್ಳಿ: ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಅರ್ಜಿ ಸಲ್ಲಿಸಲು ಹಲವು ಕಡೆಗಳಲ್ಲಿ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಗೃಹ ಲಕ್ಷ್ಮಿ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಹೇಳಿದರು.
ಸಿಂಗಾಪುರದಲ್ಲಿ ಆಪರೇಷನ್ ಬಗ್ಗೆ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದರು. ಲೋಕಸಭೆ ಚುನಾವಣೆಯಲ್ಲಿ ನಾವು 15ರಿಂದ 20 ಸ್ಥಾನ ಗೆಲ್ಲುತ್ತೇವೆ. ಜೆಡಿಎಸ್, ಬಿಜೆಪಿ ಒಂದಾಗೋದು ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಹಣ ಕೇಳಿದರೆ ಪರವಾನಗಿ ರದ್ದು ಮಾಡಿ; ಕಾರ್ಮಿಕ ಸಚಿವ ಸಂತೋಷ್ ಲಾಡ್
ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಹಣ ಪಡೆಯುವ ಸೈಬರ್ ಕೇಂದ್ರಗಳ ಪರವಾನಗಿ ರದ್ದು ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಚ್ಚರಿಕೆ ನೀಡಿದ್ದಾರೆ. ನನ್ನ ಕ್ಷೇತ್ರದ ಕೆಲವು ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಲಾಡ್ ಹೇಳಿದ್ದಾರೆ.
ನೋಂದಣಿಗಾಗಿ ಹಣವನ್ನು ಸಂಗ್ರಹಿಸಿದ ಬಗ್ಗೆ ದೂರುಗಳನ್ನು ಸ್ವೀಕರಿಸಿದರೆ, ಅಂಥ ಸೈಬರ್ ಕೇಂದ್ರಗಳ ಪರವಾನಗಿಯನ್ನು ರದ್ದುಗೊಳಿಸುತ್ತೇವೆ. ಹಣ ಪಡೆದ ಕೇಂದ್ರಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಮೂರು ಸೈಬರ್ ಕೇಂದ್ರಗಳನ್ನು ಮುಚ್ಚುವಂತೆ ತಹಶೀಲ್ದಾರ್ ಆದೇಶಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಆಗಸ್ಟ್ 16 ರಿಂದ ಗೃಹ ಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಪ್ರಾರಂಭಿಸಲಿದೆ. ಸರ್ಕಾರದ ಪ್ರಕಾರ, ಅರ್ಹರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಅರ್ಜಿ ಸಲ್ಲಿಕೆಗಾಗಿ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.