ಅಮರನಾಥ ಯಾತ್ರೆಗೆ ಹೋಗಿದ್ದವರ ಮನೆ ಬೀಗ ಮುರಿದು ಕಳ್ಳತನ – ಆರೋಪಿ ಅರೆಸ್ಟ್

ಬೆಂಗಳೂರು: ಅಮರನಾಥ ಯಾತ್ರೆಗೆಂದು ಹೋಗಿದ್ದ ಸಂದರ್ಭ ಮನೆ ಬೀಗ ಮುರಿದು ಯಾತ್ರಿಕರ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿದ ಖದೀಮನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ರಾಮಸ್ವಾಮಿ ಅಲಿಯಾಸ್ ವಡಿವೇಲು ರಾಮಸ್ವಾಮಿ ಬಂಧಿತ ಆರೋಪಿ. ಅಮರನಾಥ ಯಾತ್ರೆಗೆಂದು ಹೋಗಿದ್ದ ಯಾತ್ರಿಕನ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಅರ್ಧ ಕೆಜಿಗೂ ಅಧಿಕ ಚಿನ್ನ ಹಾಗೂ ಹಣವನ್ನು ಕದ್ದು ಆರೋಪಿ ಪರಾರಿಯಾಗಿದ್ದ. ನಗರದಲ್ಲಿ ಖಾಲಿ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಈತನನ್ನು ಕದ್ದ ಮಾಲು ಸಮೇತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿ 25ವರ್ಷಗಳಿಂದ ಮನೆಗಳ್ಳತನವನ್ನು ಕಸುಬು ಮಾಡಿಕೊಂಡಿದ್ದು, ಬೀಗ ಹಾಕಿರುತ್ತಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ತಡರಾತ್ರಿಯಲ್ಲಿ ಏರಿಯಾಗಳಲ್ಲಿ ರೌಂಡ್ಸ್ ಹೊಡೆದು ಯಾವ ಮನೆಯಲ್ಲಿ ಲೈಟ್ ಆಫ್ ಆಗಿರುತ್ತೋ ಆ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಎರಡು ದಿನಗಳ ಕಾಲ ಮನೆಗಳನ್ನು ಸರಿಯಾಗಿ ಗಮನಿಸಿ ಮನೆಯಲ್ಲಿ ಯಾರೂ ಇಲ್ಲ ಎಂದು ಗೊತ್ತಾದಮೇಲೆ ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ.

ಇದೇ ರೀತಿ ಇನ್ನೂ ಅನೇಕ ಕಡೆಗಳಲ್ಲಿ ಈತ ಕಳ್ಳತನ ಮಾಡಿದ್ದಾನೆ. ನಗರದ ಸುಬ್ರಮಣ್ಯ ನಗರ, ಮಡಿವಾಳ, ರಾಮಮೂರ್ತಿ ನಗರ, ಗಿರಿನಗರ, ಸಿಕೆ ಅಚ್ಚುಕಟ್ಟು ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ದಾನೆ ಎನ್ನುವುದು ತನಿಖೆ ವೇಳೆ ತಿಳಿದುಬಂದಿದೆ. ನಗರದಲ್ಲಿ ಹಲವು ವರ್ಷಗಳಿಂದ ಕಳ್ಳತನದ ಹಾವಳಿ ಇಟ್ಟಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ.