ವ್ಯವಸಾಯ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ. ರೈತನೊಬ್ಬನ ಕೊಲೆಯ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ, ಹಣದ ಲೇವಾದೇವಿ ಅಥವಾ ಜಮೀನು ವಿವಾದದ ವಿಚಾರದಲ್ಲಿ ಕೊಲೆ ನಡೆಯಿತಾ, ಇಲ್ಲಾ ಬೇರೆ ಯಾವುದೋ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಲಾಗಿದ್ಯಾ ಅನ್ನೋ ಹಲವು ಅನುಮಾನಗಳು ಮೂಡತೊಡಗಿವೆ. ಹೀಗೆ ತಮ್ಮದೇ ತೋಟದಲ್ಲಿ ಬರ್ಬರವಾಗಿ ಕೊಲೆಯಾಗಿರುವ ವ್ಯಕ್ತಿ, ಮೃತರ ಸಂಬಂಧಿಕರ ಅಕ್ರಂದನ, ಮತ್ತೊಂದಡೆ ಕೊಲೆಯಾಗಿರುವ ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿರುವ ಪೊಲೀಸರು, ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ತಾಲೂಕಿನಲ್ಲಿ. ಹೌದು ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದ ರೈತ ರಾಮಚಂದ್ರಪ್ಪ (50) ಎಂಬಾತನನ್ನು ಕಳೆದ ರಾತ್ರಿ ಯಾರೋ ದುಷ್ಕರ್ಮಿಗಳು ಕುತ್ತಿಗೆ ಕೊಯ್ದು ಚಾಕುವಿನಿಂದ ಮನಸೋಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಮೊನ್ನೆ ಭಾನುವಾರ ಸಂಜೆ ತಮ್ಮ ತೋಟಕ್ಕೆ ಹೋದ ರಾಮಚಂದ್ರಪ್ಪ ಅವರನ್ನು ಯಾರೋ ದುಷ್ಕರ್ಮಿಗಳು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಟೊಮ್ಯಾಟೊ ಮತ್ತು ಸೇವಂತಿ ಬೆಳೆಯನ್ನು ಬೆಳೆದಿರುವ ರಾಮಚಂದ್ರಪ್ಪ ಪ್ರತಿದಿನ ತಮ್ಮ ತೋಟಕ್ಕೆ ಹೋಗಿ ಸ್ವಲ್ಪ ಹೊತ್ತು ಕೆಲಸ ಮಾಡಿ ನಂತರ ಸಂಜೆ ಬಂದು ಮನೆಯಲ್ಲಿ ಹಾಲು ಕರೆದು ಡೈರಿಗೆ ಹಾಕುವುದು ನಿತ್ಯದ ಕಾಯಕ. ನಿನ್ನೆ ಏನೋ ಕೆಲಸದ ಮೇಲೆ ಕೆಜಿಎಫ್ ಗೆ ಹೋಗಿದ್ದ ರಾಮಚಂದ್ರಪ್ಪ ನಂತರ ಮನೆಗೆ ಬಂದು ಅಲ್ಲಿಂದ ತಮ್ಮ ತೋಟಕ್ಕೆ ಹೋಗಿದ್ದಾರೆ. ಸಂಜೆ ಸುಮಾರು 7:30 ಗಂಟೆಯಾದರೂ ಸಹ ತಂದೆ ಮನೆಗೆ ವಾಪಸ್ಸು ಬಾರದ ಹಿನ್ನೆಲೆ ಮಗ ಶ್ರೀಕಾಂತ್ ತಂದೆಯನ್ನು ಹುಡುಕಿಕೊಂಡು ತೋಟಕ್ಕೆ ಬಂದಾಗ ತೋಟದ ಬಳಿ ತಂದೆಯ ಚಪ್ಪಲಿಗಳು ದೂರು ದೂರ ಬಿದಿದ್ದವು. ಇದರಿಂದ ಭಯಗೊಂಡ ಮಗ ಶ್ರೀಕಾಂತ್ ಗ್ರಾಮದ ಕೆಲವರಿಗೆ ದೂರವಾಣಿ ಪೊನ್ ಮಾಡಿ ಕರೆಸಿಕೊಂಡು ತೋಟದ ಸುತ್ತ ಹುಡುಕಾಡಿದ್ದಾರೆ.
ಈ ವೇಳೆ ರಾಮಚಂದ್ರಪ್ಪ ಅವರು ಅವರದೇ ತೋಟದಲ್ಲಿ ಬರ್ಬರಾಗಿ ಹತ್ಯೆಯಾಗಿರುವುದು ಕಂಡು ಬಂದಿದೆ. ಇಡೀ ತೋಟದಲ್ಲಿ ಅವರನ್ನು ಅಟ್ಟಾಡಿಸಿ ಲಾಂಗು ಮಚ್ಚಿನಿಂದ ಹಲ್ಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ರಾಮಚಂದ್ರಪ್ಪನವರ ಕೈ ಬೆರಳುಗಳು ತುಂಡಾಗಿವೆ. ಜೊತೆಗೆ ಮೈಮೇಲೆ ಹಾಗು ಕುತ್ತಿಗೆ ಭಾಗದಲ್ಲಿ ಗಾಯಗಳಾಗಿದ್ದು ಯಾರೋ ಇಬ್ಬರು ಮೂರು ಜನ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ ಅನ್ನೋ ಅನುಮಾನ ಕುಟುಂಬಸ್ಥರದ್ದು.
ಇನ್ನು ರಾಮಚಂದ್ರಪ್ಪ ಮೂಲತಃ ವ್ಯವಸಾಯ ಕುಟುಂಬದವರು, ತಾವಾಯಿತು ತಮ್ಮ ಕೆಲಸವಾಯಿತು ಎಂದು ಯಾರ ತಂಟೆಗೂ ಹೋಗುತ್ತಿರಲಿಲ್ಲ, ಇರುವ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗ ಮೊನ್ನೆ ಸಂಜೆ ರಾಮಚಂದ್ರಪ್ಪ ಅವರನ್ನು ತಮ್ಮದೇ ತೋಟದಲ್ಲಿ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಏಕೆಂದರೆ ರಾಮಚಂದ್ರಪ್ಪ ಯಾವುದೇ ತಂಟೆ ತಕರಾರು ಮತ್ತು ಗಲಾಟೆ ಗಳಿಗೆ ಹೋಗುವ ಮನುಷ್ಯನಲ್ಲ. ಸದ್ಯ ರಾಮಚಂದ್ರಪ್ಪ ಕೊಲೆಯ ಸುತ್ತ ಹತ್ತು ಹಲವು ಪ್ರಶ್ನೆಗಳು ಕಾಡುತ್ತಿವೆ. ಇನ್ನು ರಾಮಚಂದ್ರಪ್ಪ ತಮ್ಮ ಜಮೀನು ಪಕ್ಕದಲ್ಲಿದ್ದ ಒಂದು ಎಕರೆ ಜಮೀನು ಖರೀದಿ ಮಾಡಿದ್ದು, ಪಕ್ಕದಲ್ಲಿಯೇ ಇದ್ದ ಗೋಮಾಳ ಜಮೀನು ಬಗ್ಗೆ ಸಮಸ್ಯೆಯಿತ್ತು. ಈ ವಿಷಯವಾಗಿ ಕೊಲೆಯಾಗಿದ್ಯಾ ಅಥವಾ ಗ್ರಾಮದ ವ್ಯಕ್ತಿಯೊಬ್ಬ ನಾಲ್ಕು ಲಕ್ಷ ರೂ ಹಣ ಪಡೆದು ರಾಮಚಂದ್ರಪ್ಪ ಅವರಿಗೆ ನೀಡಿರಲಿಲ್ಲ, ಈ ವಿಷಯದಲ್ಲಿ ಏನಾದರೂ ಕೊಲೆ ಮಾಡಲಾಗಿದೆಯಾ ಎಂಬ ಅನುಮಾನಗಳು ಮತ್ತು ಆರೋಪಗಳನ್ನು ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಕೋಲಾರದ ಎಸ್ಪಿ ನಾರಾಯಣ್ ಅವರು ಭೇಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಆರೋಪಿಗಳು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಬೇಕು ಅನ್ನೋದು ಕುಟುಂಬಸ್ಥರ ಆಗ್ರಹ. ರೈತ ರಾಮಚಂದ್ರಪ್ಪ ಅವರ ಕೊಲೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಕೊಲೆ ಮಾಡಿದ್ಯಾರು ಕೊಲೆ ಮಾಡಿರೋದೇಕೆ ಎಂಬ ಪ್ರಶ್ನೆಗಳು ಗ್ರಾಮಸ್ಥರನ್ನು ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ.