ಝಿಂಬಾಬ್ವೆಯಲ್ಲಿ ನಡೆಯುತ್ತಿರುವ ಝಿಮ್ ಆಫ್ರೊ ಟಿ10 ಲೀಗ್ನಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿದ ಸಿಕಂದರ್ ರಾಝ ದಾಖಲೆ ನಿರ್ಮಿಸಿದ್ದಾರೆ. ಹರಾರೆ ಹರಿಕೇನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬುಲವಾಯೊ ಬ್ರೇವ್ಸ್ ತಂಡದ ನಾಯಕ ರಾಝ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಅತ್ತ ಇನಿಂಗ್ಸ್ ಆರಂಭಿಸಿದ ಬುಲವಾಯೊ ಹರಾರೆ ಹರಿಕೇನ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ಹಾಗೂ ಎವಿನ್ ಲೂಯಿಸ್ ಸ್ಪೋಟಕ ಆರಂಭ ಒದಗಿಸಿದ್ದರು. 5 ಓವರ್ಗಳಲ್ಲಿ 76 ರನ್ ಬಾರಿಸಿದ ಈ ಜೋಡಿ ಬುಲವಾಯೊ ಬೌಲರ್ಗಳ ಬೆಂಡೆತ್ತಿದರು.
ಈ ಹಂತದಲ್ಲಿ ದಾಳಿಗಿಳಿದ ರಾಝ 19 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ 49 ರನ್ ಬಾರಿಸಿದ ಎವಿನ್ ಲೂಯಿಸ್ ವಿಕೆಟ್ ಪಡೆದರು. ಮತ್ತೊಂದೆಡೆ 15 ಎಸೆತಗಳಲ್ಲಿ 32 ರನ್ ಬಾರಿಸಿದ್ದ ರಾಬಿನ್ ಉತ್ತಪ್ಪ ಪ್ಯಾಟ್ರಿಕ್ ಎಸೆತದಲ್ಲಿ ಔಟಾದರು.
ಇನ್ನು 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಇರ್ಫಾನ್ ಪಠಾಣ್ 9 ಎಸೆತಗಳಲ್ಲಿ 4 ಫೋರ್ಗಳೊಂದಿಗೆ ಅಜೇಯ 18 ರನ್ ಸಿಡಿಸಿದರು. ಪರಿಣಾಮ 10 ಓವರ್ಗಳಲ್ಲಿ ಹರಾರೆ ಹರಿಕೇನ್ಸ್ ತಂಡದ ಮೊತ್ತವು 134 ಕ್ಕೆ ಬಂದು ನಿಂತಿತು.
60 ಎಸೆತಗಳಲ್ಲಿ 135 ರನ್ಗಳ ಕಠಿಣ ಗುರಿ ಪಡೆದ ಬುಲವಾಯೊ ಬ್ರೇವ್ಸ್ ತಂಡಕ್ಕೆ ಕೋಬ್ ಹರ್ಫ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 23 ಎಸೆತಗಳನ್ನು ಎದುರಿಸಿದ ಕೋಬ್ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 41 ರನ್ ಬಾರಿಸಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿಕಂದರ್ ರಾಝ ಅಕ್ಷರಶಃ ಅಬ್ಬರಿಸಿದರು. ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ರಾಝ ಹರಾರೆ ಹರಿಕೇನ್ಸ್ ಬೌಲರ್ಗಳನ್ನು ಚೆಂಡಾಡಿದರು. ಪರಿಣಾಮ ಕೇವಲ 15 ಎಸೆತಗಳಲ್ಲಿ ರಾಝ ಬ್ಯಾಟ್ನಿಂದ ಅರ್ಧಶತಕ ಮೂಡಿಬಂತು.
ಅರ್ಧಶತಕದ ಬಳಿಕ ಸಿಡಿಲಬ್ಬರ ಮುಂದುವರೆಸಿದ ಸಿಕಂದರ್ ರಾಝ ಕೇವಲ 21 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಬುಲವಾಯೊ ಬ್ರೇವ್ಸ್ ತಂಡವು 9 ಓವರ್ಗಳಲ್ಲಿ 133 ರನ್ ಕಲೆಹಾಕಿತ್ತು. ಅಂತಿಮ ಓವರ್ನಲ್ಲಿ 3 ರನ್ ಕಲೆಹಾಕುವ ಮೂಲಕ ಬುಲವಾಯೊ ಬ್ರೇವ್ಸ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ರಾಕಿಂಗ್ ರಾಝ ದಾಖಲೆ:
ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಸಿಕಂದರ್ ರಾಝ ಝಿಮ್ ಆಫ್ರೊ ಟಿ10 ಲೀಗ್ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.
ಬುಲವಾಯೊ ಬ್ರೇವ್ಸ್ ಪ್ಲೇಯಿಂಗ್ 11: ಬೆನ್ ಮೆಕ್‌ಡರ್ಮಾಟ್ (ವಿಕೆಟ್ ಕೀಪರ್) , ಬ್ಯೂ ವೆಬ್‌ಸ್ಟರ್ , ಸಿಕಂದರ್ ರಾಝ (ನಾಯಕ) , ರಿಯಾನ್ ಬರ್ಲ್ , ಟಿಮಿಸೆನ್ ಮರುಮಾ , ತಿಸಾರಾ ಪೆರೆರಾ , ಪ್ಯಾಟ್ರಿಕ್ ಡೂಲಿ , ಜ್ಯಾಕ್ ಪ್ರೆಸ್‌ವಿಡ್ಜ್ , ಟೈಮಲ್ ಮಿಲ್ಸ್ , ಟಾಸ್ಕಿನ್ ಅಹ್ಮದ್ , ಫರಾಜ್ ಅಕ್ರಮ್.