ಖಾರ್ತೌಮ್: ಡಾರ್ಫರ್ ಪ್ರದೇಶದಲ್ಲಿ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ (ಆರ್‌ಎಸ್‌ಎಫ್) ನಡುವಿನ ರಾಕೆಟ್ ಗುಂಡಿನ ವೇಳೆ 16 ಜನರು ಸಾವನ್ನಪ್ಪಿದ್ದಾರೆ.
ದಕ್ಷಿಣ ಡಾರ್ಫುರ್ ರಾಜ್ಯದ ರಾಜಧಾನಿ ನ್ಯಾಲಾದಲ್ಲಿ ಈ ಘಟನೆ ನಡೆದಿದೆ. ಸಾವಿರಾರು ಜನರು ಪಶ್ಚಿಮ ಡಾರ್ಫರ್ ಪ್ರದೇಶದಿಂದ ಪಲಾಯನ ಮಾಡುತ್ತಿದ್ದಾರೆ. ನೆರೆಯ ಚಾಡ್ ಪ್ರದೇಶದ ಗಡಿಗೆ ಸೇರಲು ಪ್ರಯತ್ನಿಸುತ್ತಿದ್ದಾರೆ. ಈ ನಿರಾಶ್ರಿತರು ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ.
ಜನಾಂಗೀಯತೆ ಕಾರಣಕ್ಕಾಗಿ ಆರ್‌ಎಸ್‌ಎಫ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಮಿಲಿಷಿಯಾಗಳು ನಿರಾಶ್ರಿತರನ್ನು ಗುರಿಯಾಗಿಸಿಕೊಂಡಿದ್ದಾರೆ. ಹಲವು ದಿನಗಳಿಂದ ಸುಡಾನ್ ಸೇನೆ ಮತ್ತು ಅರೆಸೇನೆಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇಲ್ಲಿಯವರೆಗೆ ಸುಡಾನ್‌ನಾದ್ಯಂತ ಸುಮಾರು 3,000 ಜನರು ಹತ್ಯೆಯಾಗಿದ್ದಾರೆ.
ಗೆಜಿರಾ ರಾಜ್ಯದ ಉತ್ತರದಲ್ಲಿರುವ ಹಳ್ಳಿಗಳ ಮೇಲೆ ಸೈನ್ಯದಿಂದ ವಾಯುದಾಳಿಯಾಗಿರುವುದನ್ನು ಸ್ಥಳೀಯರು ತಿಳಿಸಿದ್ದರು. ಈಚೆಗೆ ನಡೆದಿದ್ದ ವಾಯುದಾಳಿಯಿಂದ ಸುಡಾನ್ ನಗರದ ಓಮ್‌ಡುರ್‌ಮನ್‌ನ ವಸತಿ ಪ್ರದೇಶದಲ್ಲಿ ಹತ್ತಾರು ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಸುಡಾನ್‌ನಲ್ಲಿ ಸಂಘರ್ಷ ಹೆಚ್ಚಾಗಿದೆ.
ಜುಲೈ 8 ರಂದು ನಡೆದಿದ್ದ ಶೆಲ್ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದರು ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು