ಬೆಳಗಾವಿ ಜು.23: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಸಪ್ತನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಇಂದು (ಜು.23) ಈ ಪ್ರದೇಶಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೇತೃತ್ವದ ತಂಡ ಭೇಟಿ ನೀಡಲಿದೆ. ಜಿಲ್ಲಾಧಿಕರಿಗಳಿಗೆ ಜಿಲ್ಲಾ ಪಂಚಾಯತಿ ಸಿಇಒ ಹರ್ಷಲ್ ಭೋಯರ್, ಎಸ್‌ಪಿ ಡಾ.ಸಂಜೀವ ಪಾಟೀಲ್ ಸಾಥ್ ನೀಡಲಿದ್ದಾರೆ. ಬೆಳಗ್ಗೆ 11.30 ಕ್ಕೆ ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಬಳಿಯ ಘಟಪ್ರಭಾ ನದಿ, ಮಧ್ಯಾಹ್ನ 12.30ಕ್ಕೆ ನಿಪ್ಪಾಣಿ ತಾಲೂಕಿನ ವೇದಗಂಗಾ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮುಳುಗಡೆಯಾದ ಸೇತುವೆಗಳ ವೀಕ್ಷಣೆ ಮಾಡಲಿದ್ದಾರೆ.
ಮಧ್ಯಾಹ್ನ 2ಕ್ಕೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಮಾಂಜರಿ ಸೇತುವೆ, ಸಂಜೆ 4 ಗಂಟೆಗೆ ಗೋಕಾಕ ತಾಲೂಕಿನ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲೋಳಸೂರ ಸೇತುವೆ ವೀಕ್ಷಿಸಲಿದ್ದಾರೆ. ಬಳಿಕ ಪ್ರವಾಹ ಪರಿಸ್ಥಿತಿ ಉಂಟಾದರೇ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.