ರೇಷ್ಮೆ ಗೂಡಿನ ಬಾಕಿ ಹಣ ಕೊಡದೆ ಪ್ರಾಣ ಬೆದರಿಕೆ ಹಾಕಿದ ವ್ಯಾಪಾರಿ: ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರು

ಚಿಕ್ಕಬಳ್ಳಾಪುರ, ಜುಲೈ 22: ರೈತರು ಹಗಲು ರಾತ್ರಿ ಕಷ್ಟಪಟ್ಟು ಬೆಳೆಗಳನ್ನು ಬೆಳೆಯುತ್ತಾರೆ. ಕೈಗೆ ಬಂದ ಬೆಳೆಗಳನ್ನು ಮಾರಿ ರೈತರು ಸಾಲ ತೀರಿಸಿಕೊಳ್ಳುತ್ತಾರೆ. ಆದರೆ ರೈತರನ್ನು ನಂಬಿಸಿ ಬೆಳೆ ಖರೀದಿ ಮಾಡಿದ್ದ ವ್ಯಾಪಾರಿಯೊರ್ವ ರೈತರಿಗೆ ಅಸಲು ಹಣ ಕೊಡದೆ ಸತಾಯಿಸುತ್ತಿದ್ದಾನೆ. ಇದರಿಂದ ನೊಂದ ರೈತರು ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ

ಜಿಲ್ಲೆತ ಶಿಡ್ಲಘಟ್ಟ ತಾಲ್ಲೂಕು ಕುಂದಲಗುರ್ಕಿ ಗ್ರಾಮದ ರೈತ ಸುರೇಶ್ ಕುಮಾರ್​ ರೇಷ್ಮೆ ಗೂಡು ಬೆಳೆದಿದ್ದಾರೆ. ಬೆಳೆದ ರೇಷ್ಮೆ ಗೂಡನ್ನು ಶಿಡ್ಲಘಟ್ಟ ನಗರದಲ್ಲಿರುವ ರೇಷ್ಮೆ ಗೂಡು ಮಾರುಕಟ್ಟೆಗೆ ಸಾಗಾಟ ಮಾಡಿದರು. ಆದರೆ ಅದನ್ನು ಗಮನಿಸಿದ ಸ್ಥಳಿಯ ರೇಷ್ಮೆ ಗೂಡು ವ್ಯಾಪಾರಿಗಳಾದ ಸೈಯದ್ ಸೈಪ್ ರಾಜಾ, ಅಪ್ರೋಜ್ ಮತ್ತು ಇರ್ಫಾನ್ ರೈತನ ಮನವೋಲಿಸಿದ್ದಾರೆ.

ಸರ್ಕಾರಿ ಮಾರುಕಟ್ಟೆಯಲ್ಲಿ ಗೂಡನ್ನು ಮಾರಾಟ ಮಾಡಿದರೆ ತಕ್ಷಣ ಹಣ ಬರಲ್ಲ, ಉತ್ತಮ ಬೆಲೆ ಬರಲ್ಲ ಅಂತ ಮನವೋಲಿಸಿ ರೈತನಿಂದ ರೇಷ್ಮೆ ಗೂಡು ಖರೀದಿ ಮಾಡಿದ್ದಾರೆ. ಪ್ರತಿ ಕೆ.ಜಿ ಗೂಡಿಗೆ 400 ರೂ.ಗಳಂತೆ ಒಟ್ಟು 43,200 ರೂ.ಗಳಿಗೆ ವ್ಯಾಪಾರ ಮಾಡಿದ್ದಾರೆ.

ಗೂಡು ಖರೀದಿ ಸಮಯದಲ್ಲಿ ವ್ಯಾಪಾರಿ ಇರ್ಫಾನ್ ರವರು 20.000 ರೂ. ನಗದು ಹಣವನ್ನು ಫೋನ್ ಪೇ ಮಾಡಿದ್ದಾನೆ. ಉಳಿದ ಹಣವನ್ನು ಸ್ವಲ್ಪ ಸಮಯದ ನಂತರ ನೀಡುವುದಾಗಿ ತಿಳಿಸಿದ್ದನಂತೆ. ಆದರೆ ಬಳಿಕ ಫೋನ್​ ಸಂಪರ್ಕ ಸಿಗದೆ ರೈತನನ್ನು ಸತಾಯಿಸುತ್ತಿದ್ದಾನೆ. ವ್ಯಾಪಾರ ಮಾಡಿ ಒಂದು ವಾರ ಆದರೂ ಇದುವರೆಗೂ ಹಣವನ್ನು ಕೊಡುತ್ತಿಲ್ಲ.

ವ್ಯಾಪಾರಿಯನ್ನು ಹುಡುಕಿಕೊಂಡು ಮನೆಯ ಬಳಿ ಹೊದರೆ ಆತನ ಪತ್ನಿ ಹಾಗೂ ಸಂಬಂಧಿಗಳು ಪ್ರಾಣ ಬೆದರಿಕೆ ಹಾಕಿದ್ದಾರಂತೆ. ಇದರಿಂದ ನ್ಯಾಯ ಕೊಡಿಸುವಂತೆ ರೈತ ಸುರೇಶಕುಮಾರ್ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.