ಬಡ ರೋಗಿಗಳಿಗೆ ಉಚಿತ ಊರುಗೋಲು: ಮೈಸೂರು ಕೆಆರ್ ಆಸ್ಪತ್ರೆ ನೆಫ್ರೋ ಯುರಾಲಜಿಗೆ ಹೊಸ ಲೇಸರ್ ಯಂತ್ರ, ಕಿಡ್ನಿ ಕಲ್ಲು ಪುಡಿ ಪುಡಿ ಮಾಡುತ್ತದೆ!

ಕಿಡ್ನಿಯಲ್ಲಿ ಕಲ್ಲಿದೆ, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತೆ, ಕೈಯಲ್ಲಿ ಕಾಸಿಲ್ಲ, ಏನ್ ಮಾಡೋದು? ಅಂತಾ ಯೋಚನೆಯಲ್ಲಿದ್ದೀರಾ. ಹಾಗಿದ್ರೆ ಚಿಂತೆ ಬಿಡಿ. ಯಾಕಂದ್ರೆ ಬಡವರ ಪಾಲಿನ ಸಂಜೀವಿನಿ ಕೆ.ಆರ್‌‌. ಆಸ್ಪತ್ರೆಯ ನೆಫ್ರೋ ಯುರಾಲಜಿ ವಿಭಾಗದಲ್ಲಿ ಇನ್ಮುಂದೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ, ಅದೂ ಸಹ ಉಚಿತವಾಗಿ! ಸರ್ಕಾರಿ ಆಸ್ಪತ್ರೆ ಅಂದ್ರೆ ಅಲ್ಲಿ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ ಅಂತಾ ಮೂಗು ಮುರಿಯುವರೇ ಹೆಚ್ಚು. ಇಂತಹ ಕಾಲಘಟ್ಟದಲ್ಲಿ ಮೈಸೂರಿನ ಕೆ ಆರ್ ಆಸ್ಪತ್ರೆಯು ರೋಗಿಗಳಿಗೆ ವರದಾನವಾಗಿದೆ. ಹೌದು ಇದಕ್ಕೆ ಕಾರಣವಾಗಿರುವುದು ಮೈಸೂರಿನ ಕೆ.ಆರ್. ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಲಜಿ ವಿಭಾಗಕ್ಕೆ ಬಂದಿರುವ ಹೊಸ ಯಂತ್ರ. ಈ ಯಂತ್ರದಿಂದ ಲೇಸರ್ ಟ್ರೀಟ್ ಮೆಂಟ್ ಮೂಲಕ ರೋಗಿಯ ಕಿಡ್ನಿಯಲ್ಲಿ ಇರುವ ಸುಮಾರು 2 ಎಂ.ಎಂ. ಒಳಗಿನ ಕಲ್ಲುಗಳನ್ನು ಪುಡಿ ಮಾಡಿ ನೇರವಾಗಿ ಹೊರತೆಗೆಯಬಹುದಾಗಿದೆ. ಅತ್ಯಾಧುನಿಕ ವಿಧಾನದ ಚಿಕಿತ್ಸೆ ಇನ್ನು ಮುಂದೆ ನೆಪ್ರೋ ಯುರಾಲಜಿ ವಿಭಾಗದಲ್ಲಿ ಉಚಿತವಾಗಿ ದೊರೆಯಲಿದೆ‌ ಎಂದು ಕೇಶವ ಮೂರ್ತಿ- ಮುಖ್ಯಸ್ಥರು, ನೆಪ್ರೋ ಯುರಾಲಜಿ ಅವರು ಮಾಹಿತಿ ನೀಡಿದ್ದಾರೆ.

ಇನ್ನು ಸರ್ಕಾರಿ ಆಸ್ಪತ್ರೆ ವ್ಯವಸ್ಥೆಯಲ್ಲಿ ಇದೇ ಮೊದಲಬಾರಿಗೆ 35 watt holmium laser ಯಂತ್ರವನ್ನು ಮೈಸೂರಿನ ನೆಪ್ರೋ ಯುರಾಲಜಿ ಯೂನಿಟ್ ನಲ್ಲಿ ಬಳಸಲಾಗುತ್ತಿದೆ. ಬಿಪಿಎಲ್, ಎಸ್ ಸಿ ಎಸ್ ಟಿ‌ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಎಪಿಎಲ್ ಕಾರ್ಡ್ ದಾರರಿಗೆ ಶೇ 30% ರಿಯಾಯಿತಿ ಸಿಗಲಿದೆ. ಮೂತ್ರನಾಳದ ಮೂಲಕ ಫೈಬರ್ ಬಳಸಿ ಲೇಸರ್ ಮೂಲಕ ಕಿಡ್ನಿಯಲ್ಲಿರುವ ಕಲ್ಲುಗಳನ್ನು ಪುಡಿ ಮಾಡಿ ಹೊರ ತೆಗೆಯಲಾಗುತ್ತದೆ ಎಂದು ಮೈಸೂರು ಘಟಕದ ಮುಖ್ಯಸ್ಥರಾದ ಡಾ. ನರೇಂದ್ರ ಜೆ.ಬಿ. ಅವರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗ್ತಾ ಇಲ್ಲ ಅಂತಾ ರೋಗಿಗಳು ಒಂದು ಕಡೆ ಪರದಾಡುತ್ತಿದ್ದರೆ, ಮತ್ತೊಂದು ಕಡೆ ನೂತನ ಚಿಕಿತ್ಸಾ ವಿಧಾನದ ಮೂಲಕ ನೆಫ್ರೋಯುರಾಲಜಿ ಕೇಂದ್ರ ಸುಧಾರಣೆಯತ್ತ ಹೆಜ್ಜೆ ಹಾಕುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.