ಶ್ರೀಲಂಕಾದಲ್ಲಿ ನಿನ್ನೆ ಅಂದರೆ, ಜುಲೈ 21 ರಂದು ನಡೆದ ಎಮರ್ಜಿಂಗ್ ಎಷ್ಯಾ ಕಪ್ನ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಜಯ ಗಳಿಸಿದ ಭಾರತ ಹಾಗೂ ಪಾಕಿಸ್ತಾನ ಎ ತಂಡಗಳು ಇದೀಗ ಇದೇ ಭಾನುವಾರದಂದು ಚಾಂಪಿಯನ್ ಪಟ್ಟಕ್ಕಾಗಿ ಕದನಕ್ಕಿಳಿಯಲಿವೆ. ದಿನದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ ತಂಡವನ್ನು 60 ರನ್ಗಳಿಂದ ಮಣಿಸಿದ ಹಾಲಿ ಚಾಂಪಿಯನ್ ಪಾಕಿಸ್ತಾನ ಎ ತಂಡ ಮೊದಲ ಫೈನಲಿಸ್ಟ್ ಆಗಿ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿತ್ತು. ಬಳಿಕ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಎ ತಂಡವನ್ನು 51 ರನ್ಗಳಿಂದ ಮಣಿಸಿದ ಯಶ್ ಧುಲ್ ನೇತೃತ್ವದ ಭಾರತ ಎ ತಂಡ ಎರಡನೇ ಫೈನಲಿಸ್ಟ್ ಆಗಿ ಫೈನಲ್ ಪ್ರವೇಶಿಸಿದೆ. ಇನ್ನು ಬಾಂಗ್ಲಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಲ್ಪ ಟಾರ್ಗೆಟ್ ಸೆಟ್ ಮಾಡಿದ ಹೊರತಾಗಿಯೂ ಗೆಲುವಿಗಾಗಿ ಹೋರಾಟ ನಡೆಸಿದ ಭಾರತ ಯುವ ಪಡೆ, ಬಾಂಗ್ಲಾ ತಂಡವನ್ನು 150 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಈ ನಡುವೆ ಉಭಯ ತಂಡಗಳ ಆಟಗಾರರು ಮೈದಾನದಲ್ಲೇ ಕಿತ್ತಾಟಕ್ಕಿಳಿದ ಪ್ರಸಂಗವೂ ನಡೆಯಿತು.
ಯಶ್ ಏಕಾಂಗಿ ಹೋರಾಟ
ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಬಾಂಗ್ಲಾ ತಂಡ, ಕರಾರುವಕ್ಕಾದ ದಾಳಿ ನಡೆಸಿ ಟೀಂ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿದರು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತ್ತಾದರೂ, ತ್ವರಿತಗತಿಯಲ್ಲಿ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಆದರೂ ನಾಯಕ ಯಶ್ ಧುಲ್ ಅವರ ಅರ್ಧಶತಕ ಹೋರಾಟದ ಇನ್ನಿಂಗ್ಸ್ ನೆರವಿನಿಂದಾಗಿ ಟೀಂ ಇಂಡಿಯಾ 211 ರನ್ ಕಲೆಹಾಕಿತು.
ಈ ಸುಲಭ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಆರಂಭಿಕರಿಬ್ಬರೂ ಸ್ಫೋಟಕ ಆರಂಭ ನೀಡಿದರು. ಇಬ್ಬರು ಮುರಿಯದ ವಿಕೆಟ್ಗೆ 70 ರನ್ ಕಲೆಹಾಕಿದರು. ಹೀಗಾಗಿ ಟೀಂ ಇಂಡಿಯಾ ಪಂದ್ಯದಲ್ಲಿ ಕೊಂಚ ಹಿನ್ನಡೆ ಅನುಭವಿಸಿತ್ತು. ಆದರೆ ಭಾರತದ ಸ್ಪಿನ್ ದಾಳಿ ಎದುರು ಮಂಕಾದ ಬಾಂಗ್ಲಾ ತಂಡದ 10 ವಿಕೆಟ್ಗಳು 80 ರನ್ಗಳ ಅಂತರದಲ್ಲಿ ಪತನಗೊಂಡವು.
ವಿಕೆಟ್ ಪತನದಿಂದ ಹತಾಶರಾದ ಬಾಂಗ್ಲಾ ಬ್ಯಾಟರ್
ಅಲ್ಪ ಟಾರ್ಗೆಟ್ ಮುಂದಿಟ್ಟುಕೊಂಡು ಕಳಪೆ ಆರಂಭ ಮಾಡಿದರ ಹೊರತಾಗಿಯೂ ಭಾರತ ತಂಡ, ಪಂದ್ಯದಲ್ಲಿ ಪ್ರಚಂಡ ಪುನರಾಗಮನ ಮಾಡಿತು. ಭಾರತದ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಬಾಂಗ್ಲಾ ಪಡೆಯನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡದ ಬೌಲಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ, ತಮ್ಮ ಆಕ್ರಮಣಶೀಲತೆಯಿಂದ ಬಾಂಗ್ಲಾದೇಶ ತಂಡದ ಮೇಲೆ ಮಾನಸಿಕವಾಗಿಯೂ ಕೂಡ ಪ್ರಭಾವ ಬೀರಿದರು.
ಇದರ ಪರಿಣಾಮ ಸೌಮ್ಯ ಸರ್ಕಾರ್ ಔಟಾದ ತಕ್ಷಣ ಭಾರತೀಯ ಆಟಗಾರರು ತೋರಿದ ಆಕ್ರಮಣಶೀಲತೆ, ಅನುಭವಿ ಬ್ಯಾಟರ್ನನ್ನು ಕೆರಳಿಸಿತು. ಆದರೆ ಬಾಂಗ್ಲಾ ಆಲ್ರೌಂಡರ್ಗೆ ಸರಿಯಾದ ಟಕ್ಕರ್ ನೀಡಿದ ಭಾರತ ಯುವ ಪಡೆ ಮೈದಾನದಲ್ಲೇ ವಾಗ್ವಾದಕ್ಕಿಳಿಯಿತು. ವಾಸ್ತವವಾಗಿ ಭಾರತದ ಸ್ಪಿನ್ನರ್ ಯುವರಾಜ್ ಸಿಂಗ್ ದೊಡಿಯಾ ಅವರ ಎಸೆತದಲ್ಲಿ ಸೌಮ್ಯ ಸರ್ಕಾರ್ ನೀಡಿದ ಕ್ಯಾಚ್ ಅನ್ನು ಕನ್ನಡಿಗ ನಿಕಿನ್ ಜೋಸ್ ಡೈವ್ ಮಾಡುವ ಮೂಲಕ ಹಿಡಿದರು. ಕೂಡಲೇ ಭಾರತ ಯುವ ಪಡೆ ವಿಕೆಟ್ ಪಡೆದ ಖುಷಿಯನ್ನು ಸಂಭ್ರಮಿಸಲಾರಂಭಿಸಿತು. ಇದು ಬಾಂಗ್ಲಾ ಬ್ಯಾಟರ್ ಸೌಮ್ಯ ಸರ್ಕಾರ್ ಅವರನ್ನು ಕೆರಳಿಸಿತು. ಕೆಲವೇ ಸೆಕೆಂಡುಗಳಲ್ಲಿ ಸೌಮ್ಯ ಸರ್ಕಾರ್ ಮತ್ತು ಭಾರತದ ಆಟಗಾರ ಹರ್ಷಿತ್ ರಾಣಾ ನಡುವೆ ತೀವ್ರ ವಾಗ್ವಾದ ನಡೆಯಿತು.
ಸಮಾಧಾನಪಡಿಸಿದ ಸುದರ್ಶನ್
ಪರಿಸ್ಥಿತಿ ಹದಗೆಡುವ ಮುನ್ನವೇ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಹಾಗೂ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸುದರ್ಶನ್ ಬಾಂಗ್ಲಾದೇಶದ ಅನುಭವಿ ಬ್ಯಾಟ್ಸ್‌ಮನ್ ಸರ್ಕಾರ್‌ಗೆ ಶಾಂತವಾಗಿ ಪೆವಿಲಿಯನ್‌ಗೆ ಮರಳುವಂತೆ ಸಲಹೆ ನೀಡಿದರು. ಈ ವೇಳೆ ಸುದರ್ಶನ್ ಕೂಡ ಕೈಮುಗಿದು ಸಮಾಧಾನಪಡಿಸಲು ಯತ್ನಿಸಿದರು. ಅಂತಿಮವಾಗಿ ಸೌಮ್ಯ ಸರ್ಕಾರ್ ಔಟಾದ ಬೆಸರದೊಂದಿಗೆ ಪೆವಿಲಿಯನ್ ಸೇರಿಕೊಂಡರು.