ಕಲಬುರಗಿಯಲ್ಲಿ ಮುಂದಿನ ಒಂದು ವಾರ ಮಳೆ – ನದಿತೀರದಲ್ಲಿ ಹೈಅಲರ್ಟ್ ಘೋಷಣೆ

ಕಲಬುರಗಿ: ರಾಜ್ಯಾದ್ಯಾಂತ ವರುಣನ ಆಗಮನವಾಗಿದ್ದು, ಕಾದು ಕಬ್ಬಿಣದಂತಾಗಿದ್ದ ಜಿಲ್ಲೆಗಳು ತಂಪೇರಿವೆ. ಅದೇ ರೀತಿ ಕಲಬುರಗಿಯಲ್ಲಿ ಕಳೆದ ಐದು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.

ಕಲಬುರಗಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮುಂದಿನ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಮಳೆಯ ಪರಿಣಾಮ ಕಲಬುರಗಿ ಜಿಲ್ಲಾಡಳಿತ ನದಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನದಿ, ಹಳ್ಳ, ಕೊಳ್ಳ, ಕೆರೆ ದಂಡೆಗೆ ತೆರಳದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಪ್ರವಾಹ ಉಂಟಾಗುವ ಸಾಧ್ಯತೆಯಿಂದ ಗ್ರಾಮಗಳಲ್ಲಿ ಡಂಗೂರ ಸಾರಿಸಲು ಡಿಸಿ ಆದೇಶ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಸರ್ವಸನ್ನದ್ಧರಾಗಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಅಲ್ಲದೇ ತಗ್ಗು ಪ್ರದೇಶದ ಮತ್ತು ನದಿ ಪಾತ್ರದ ಜನರನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರ ತೆರೆಯುವಂತೆ ಸೂಚನೆ ನೀಡಲಾಗಿದೆ ಜಿಲ್ಲೆಯಲ್ಲಿ ಈಗಾಗಲೇ ಕಾಗಿಣ ನದಿ, ಭೀಮಾ ನದಿ, ಮುಲ್ಲಮಾರಿ ನದಿ ತುಂಬಿ ಹರಿಯುತ್ತಿದ್ದು, ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.