ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಕರವೇ (ಪ್ರ) ಶೆಟ್ಟಿ ಬಣದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರವೀಣ್ ಕೊಠಾರಿ ಮನವಿ

ದಾಂಡೇಲಿ: ಜಿಲ್ಲೆಯ ಗಡಿ ತಾಲ್ಲೂಕಿನಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಅತ್ಯಂತ ನೋವಿನ ವಿಚಾರ. ಕಾರವಾರದಲ್ಲಿ 3, ಅಂಕೋಲಾದಲ್ಲಿ 1 ಮತ್ತು ಹೊನ್ನಾವರದಲ್ಲಿ 1 ಹೀಗೆ ಜಿಲ್ಲೆಯಲ್ಲಿ ಒಟ್ಟು 5 ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಯೋಗ್ಯ ಕ್ರಮವಲ್ಲ. ಗಡಿ ಜಿಲ್ಲೆಯ ತಾಲ್ಲೂಕುಗಳಲ್ಲಿ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈ 5 ಶಾಲೆಗಳನ್ನು ಮುಚ್ಚದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಕರವೇ (ಪ್ರ) ಬಣದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಪ್ರವೀಣ್ ಕೊಠಾರಿಯವರು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಅವರು ನಗರದಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲ ಎಂಬ ಕಾರಣಕ್ಕೆ ಶಾಲೆಗಳನ್ನು ಮುಚ್ಚುವುದು ಸೂಕ್ತ ಕ್ರಮವಲ್ಲ. ವಿದ್ಯಾರ್ಥಿಗಳ ದಾಖಲಾತಿ ಯಾಕೆ ಆಗುತ್ತಿಲ್ಲ. ವಿದ್ಯಾರ್ಥಿಗಳ ದಾಖಲಾತಿಗೆ ಯಾವ ಕ್ರಮವನ್ನು ಕೈಗೊಳ್ಳಬೇಕೆನ್ನುವ ಚಿಂತನೆ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಚ್ಚಲ್ಪಟ್ಟ 5 ಸರಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸುವುದರ ಜೊತೆಗೆ ವಿದ್ಯಾರ್ಥಿಗಳ ದಾಖಲಾತಿಗೆ ಉಪಯುಕ್ತ ಕ್ರಮವನ್ನು ಕೈಗೊಂಡು ಕನ್ನಡ ಶಾಲೆಗಳನ್ನು ಮತ್ತೇ ಬೆಳಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಗಡಿಭಾಗದಲ್ಲಿ ಕನ್ನಡದ ಉಳಿವಿಗಾಗಿ ಆಧ್ಯತೆಯಡಿ ಕ್ರಮವನ್ನು ಕೈಗೊಳ್ಳಬೇಕೆಂದು ಪ್ರವೀಣ್ ಕೊಠಾರಿಯವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರವೇ ಮುಖಂಡ ಸಂಜು ಸಿಂಗಾಯಿ ಉಪಸ್ಥಿತರಿದ್ದರು.