ಗುರುವಾರದಿಂದ ಆರಂಭವಾಗಿರುವ ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮೊದಲ ದಿನವೇ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ಆರಂಭಿಸಿರುವ ಆರಂಭಿಕರಾದ ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ನೆರವಿನಿಂದ 288 ಕಲೆಹಾಕಿದೆ.
ಇನ್ನು ಮೊದಲ ಟೆಸ್ಟ್ನಲ್ಲಿ ದಾಖಲೆಯ ಶತಕ ಸಿಡಿಸಿದ ಜೈಸ್ವಾಲ್, ಎರಡನೇ ಟೆಸ್ಟ್ನಲ್ಲೂ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಚೊಚ್ಚಲ ಸರಣಿಯಲ್ಲೇ ಮಾಡಬಹುದಾಗಿದ್ದ ಅದೊಂದು ದಾಖಲೆಯಿಂದ ಅವಕಾಶ ವಂಚಿತರಾದರು.
ಎರಡನೇ ಟೆಸ್ಟ್ನಲ್ಲಿ 57 ರನ್ ಬಾರಿಸಿದ ಜೈಸ್ವಾಲ್, ವೃತ್ತಿಜೀವನದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಕಲೆ ಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಮೊದಲ ಟೆಸ್ಟ್ನಲ್ಲಿ 171 ರನ್ ಕಲೆಹಾಕಿದ್ದ ಜೈಸ್ವಾಲ್ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 57 ರನ್ ಬಾರಿಸಿದರು. ಈ ಮೂಲಕ ತನ್ನ ಮೊದಲ ಎರಡು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಟ್ಟು 228 ರನ್‌ಗಳನ್ನು ಗಳಿಸಿದ ಜೈಸ್ವಾಲ್, ವೃತ್ತಿಜೀವನದ ಮೊದಲ ಎರಡು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಶಿಖರ್ ಧವನ್ ಅವರನ್ನು ಹಿಂದಿಕ್ಕಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಶಿಖರ್ ಧವನ್ ಆಡಿದ ತಮ್ಮ ಮೊದಲ ಎರಡು ಇನ್ನಿಂಗ್ಸ್‌ಗಳಲ್ಲಿ 210 ರನ್ ಸಿಡಿಸಿದ್ದರು. ಅಲ್ಲದೆ ತಮ್ಮ ಮೊದಲ ಇನ್ನಿಂಗ್ಸ್ನಲ್ಲಿಯೇ 187 ರನ್ ಕಲೆಹಾಕಿದ್ದರು.
ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ರೋಹಿತ್ ಶರ್ಮಾ ಮೊದಲ ಎರಡು ಪಂದ್ಯಗಳಲ್ಲಿ 288 ರನ್ ಕಲೆಹಾಕಿದ್ದರು. ಈ ಮೂಲಕ ಭಾರತದ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನ ಮೊದಲ ಎರಡು ಇನ್ನಿಂಗ್ಸ್‌ಗಳಲ್ಲಿ 267 ರನ್ ಬಾರಿಸಿದ್ದ ಸೌರವ್ ಗಂಗೂಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.ಪ್ರಸ್ತುತ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 228 ರನ್ ಕಲೆಹಾಕಿರುವ ಯಶಸ್ವಿ ಜೈಸ್ವಾಲ್ ಮೂರನೇ ಸ್ಥಾನದಲ್ಲಿದ್ದಾರೆ.ಹಾಗೆಯೇ ಆಸೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ 210 ರನ್ ಬಾರಿಸಿದ್ದ ಶಿಖರ್ ಧವನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.ಐದನೇ ಸ್ಥಾನದಲ್ಲಿ ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿದಿರು ಪೃಥ್ವಿ ಶಾ 204 ರನ್ ಬಾರಿಸುವುದರೊಂದಿಗೆ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.