ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಕಾರು ಅಪಘಾತಕ್ಕೀಡಾದ ನೆನಪು ಇನ್ನೂ ಮಾಸಿಲ್ಲ. ಆದರೆ ಅಷ್ಟರಲ್ಲೇ ಟೀಂ ಇಂಡಿಯಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಭೀಕರ ಕಾರು ಅಪಘಾತಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ಭಾರತದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ ಭೀಕರ ಕಾರು ಅಪಘಾತಕ್ಕೀಡಾಗಿದ್ದು, ಜುಲೈ 4 ರ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೀರತ್‌ನಲ್ಲಿರುವ ಅವರ ಮನೆಗೆ ತೆರಳುತ್ತಿರುವಾಗ ಪ್ರವೀಣ್ ಕುಮಾರ ಚಲಾಯಿಸುತ್ತಿದ್ದ ಲ್ಯಾಂಡ್ ರೋವರ್‌ಗೆ ಕಾರಿಗೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ವೇಳೆ ಕಾರಿನಲ್ಲಿ ಪ್ರವೀಣ್ ಕುಮಾರ ಜೊತೆಗೆ ಅವರ ಹಿರಿಯ ಮಗ ಕೂಡ ಇದ್ದರು ಎಂದು ವರದಿಯಾಗಿದ್ದು, ಇಬ್ಬರೂ ಸ್ವಲ್ಪದರಲ್ಲೇ ಅಪಘಾತದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಟೀಂ ಇಂಡಿಯಾ ಮಾಜಿ ವೇಗಿ ಪ್ರವೀಣ್ ಕುಮಾರ್ ಮಂಗಳವಾರ ರಾತ್ರಿ ಪಾಂಡವ ನಗರದಿಂದ ಅವರ ಮನೆಗೆ ಮರಳುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಕಮಿಷನರ್ ನಿವಾಸದ ಎದುರು ಅತೀವೇಗವಾಗಿ ಬಂದ ಕಾರೊಂದು ಪ್ರವೀಣ್ ಕುಮಾರ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪ್ರವೀಣ್ ಚಲಾಯಿಸುತ್ತಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಅಪಘಾತದಲ್ಲಿ ಪ್ರವೀಣ್ ಕುಮಾರ್ ಮತ್ತು ಅವರ ಮಗನಿಗೆ ಯಾವುದೇ ಹಾನಿಯಾಗಿಲ್ಲ.