ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ನಸೀರ್ ಬಗ್ಗೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಮತ್ತಷ್ಟು ರಹಸ್ಯಗಳನ್ನ ಬಯಲಿಗೆಳೆದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಉಗ್ರ ನಸೀರ್ ದಿನಕ್ಕೆ 4-5 ಸಾವಿರ ದುಡ್ಡು ಸಂಪಾದನೆ ಮಾಡುತ್ತಿದ್ದ. ಬಟ್ಟೆ, ಡ್ರೈ ಫ್ರೂಟ್ಸ್, ಸ್ವೀಟ್ಸ್ ಮಾಡುತ್ತಿದ್ದ. ಉಗ್ರರಿಗೆ ನಿಗದಿಯಾಗಿರೊ ಹೈ ಸೆಕ್ಯುರಿಟಿ ಸೆಲ್ ಬಿಟ್ಟು ಬೇರೆ ಕಡೆ ಸಹ ಓಡಾಟ ನಡೆಸುತ್ತಿದ್ದ ನಸೀರ್ ವಿಚಾರಣಾಧೀನ ಕೈದಿಗಳನ್ನ ತನ್ನ ರೂಮಿಗೆ ಹಾಕಿಸಿಕೊಂಡು ಬಿಸಿನೆಸ್ ಮಾಡ್ತಿದ್ದ. ಹೊರಗಡೆಯಿಂದ ಡ್ರೈ ಫ್ರೂಟ್ಸ್, ಬಟ್ಟೆ ತರಿಸಿಕೊಂಡು ಜೈಲಿನ ಖೈದಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡ್ತಿದ್ದ ಎಂಬ ಅನೇಕ ರಹಸ್ಯಗಳು ಬಯಲಾಗಿದೆ.
45 ಸಜೀವ ಗುಂಡುಗಳು ಪತ್ತೆ: ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಶಂಕಿರಿಂದ 45 ಸಜೀವ ಗುಂಡುಗಳನ್ನ ಪತ್ತೆ ಮಾಡಿ ಸೀಜ್ ಮಾಡಿದ್ದಾರೆ. 45 ಗುಂಡುಗಳ ಪೈಕಿ 15 ಸಜೀವ ಗುಂಡುಗಳು ಪೊಲೀಸರು ಬಳಸುವ ಗುಂಡುಗಳು ಎಂದು ತಿಳಿದುಬಂದಿದೆ. .303 ಹಾಗೂ .9 ಎಂಎಂನ ಸಜೀವ ಗುಂಡುಗಳು ಪತ್ತೆಯಾಗಿದ್ದು, ಪೊಲೀಸರಿಗೂ ತಲೆಬಿಸಿಯಾಗಿದೆ. ಹೌದು. ಪತ್ತೆಯಾದ ಗುಂಡುಗಳಲ್ಲಿ .303 ಹಾಗೂ .9 ಎಂಎಂ ನ ಸಜೀವ ಗುಂಡುಗಳು ಪೊಲೀಸರು ಹಾಗೂ ಮಿಲಿಟರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಬಿಎಸ್‌ಎಫ್, ಐಟಿಬಿಪಿ, ಸಿಐಎಸ್‌ಎಫ್ ನಂತಹ ಅರೆಸೇನಾ ಪಡೆಗಳು ಕೂಡ ಈ ಬುಲೆಟ್‌ಗಳನ್ನ ಬಳಕೆ ಮಾಡುತ್ತವೆ.
ಈ ಬುಲೆಟ್‌ಗಳು ಶಂಕಿತರ ಕೈ ಸೇರಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಮಾವೋವಾದಿಗಳು ಹಾಗೂ ಪೊಲೀಸರ ಸಂಘರ್ಷದಲ್ಲಿ ಈ ಗುಂಡುಗಳು ಕಳುವಾಗಿರಬಹುದಾ? ಅಥವಾ ಎಲ್ಲಾದರೂ ಪೊಲೀಸರಿಂದ ದರೋಡೆ ಮಾಡಿರಬಹುದಾ? ಅಥವಾ ಪೊಲೀಸ್ ಇಲಾಖೆಯವರೇ ಬುಲೆಟ್‌ಗಳನ್ನ ಮಾರಾಟ ಮಾಡಿರಬಹುದಾ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.