ಸರ್ಕಾರದಿಂದ ಟೊಮೆಟೋಗೆ ಸಬ್ಸಿಡಿ ಇನ್ನಷ್ಟು ಹೆಚ್ಚಳ; ಕಿಲೋಗೆ 70 ರೂನಂತೆ ಮಾರಾಟ

ನವದೆಹಲಿ: ಟೊಮೆಟೋ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಬ್ಸಿಡಿ ದರದಲ್ಲಿ ಮಾರಾಟ ನಡೆಸುತ್ತಿರುವ ಕೇಂದ್ರ ಸರ್ಕಾರ ಇದೀಗ ಟೊಮೆಟೋ ಸಬ್ಸಿಡಿಯನ್ನು ಇನ್ನಷ್ಟು ಹೆಚ್ಚಿಸಿದೆ. ಇದೀಗ ಕಿಲೋಗೆ 70 ರುಪಾಯಿಯಂತೆ ಸರ್ಕಾರದ ವತಿಯಿಂದ ಟೊಮೆಟೋ ಮಾರಾಟವಾಗುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಸಂಸ್ಥೆಗಳ ರೀಟೇಲ್ ಔಟ್​ಲೆಟ್​ಗಳ ಮೂಲಕ ಮತ್ತು ಮೊಬೈಲ್ ವ್ಯಾನ್​ಗಳ ಮೂಲಕ ಟೊಮೆಟೋವನ್ನು ಸಬ್ಸಿಡಿ ದರದಲ್ಲಿ ಮಾರಲಾಗುತ್ತಿದೆ. ಬೆಲೆ ಏರಿಕೆ ಹೆಚ್ಚು ಇರುವ ಕಡೆ ಸಬ್ಸಿಡಿ ಟೊಮೆಟೋ ಮಾರಾಟ ಹೆಚ್ಚು ಮಾಡಲಾಗಿದೆ.

ಭಾರತದಲ್ಲಿ ಟೊಮೆಟೋ ರೀಟೇಲ್ ಮಾರುಕಟ್ಟೆಯ ಸರಾಸರಿ ಬೆಲೆ ಕಿಲೋಗೆ 120 ರೂ ಇದೆ. ಕೆಲವೆಡೆ ಅದರ ಬೆಲೆ 200 ರೂ ಮೇಲೆಯೇ ಇದೆ. ಕೋಲಾರದಲ್ಲಿ ಟೊಮೆಟೋ ಅತಿಹೆಚ್ಚು ಬೆಳೆಯಲಾಗುತ್ತಿದ್ದರೂ ನೆರೆಯ ಬೆಂಗಳೂರಿನಲ್ಲಿ ಟೊಮೆಟೋದ ರೀಟೇಲ್ ದರ 100 ರೂಗಿಂತ ಕಡಿಮೆಗೆ ಇಳಿಯುತ್ತಲೇ ಇಲ್ಲ. ಬೆಂಗಳೂರಿನಂತಹ ಸ್ಥಿತಿಯ ಮುಂಬೈಗೂ ಇದೆ. ಮಹಾರಾಷ್ಟ್ರದಲ್ಲೂ ಟೊಮೆಟೋ ಹೆಚ್ಚು ಬೆಳೆಯಲಾಗುತ್ತಿದ್ದರೂ ಮುಂಬೈನಲ್ಲಿ ಟೊಮೆಟೋದ ರೀಟೇಲದ್ ದರ 150 ರೂ ಮೇಲೆಯೇ ಇದೆ.

ಜುಲೈ 14ರಿಂದ ಸರ್ಕಾರ ಟೊಮೆಟೋವನ್ನು ಸಬ್ಸಿಡಿ ದರದಲ್ಲಿ ಮಾರಲು ತೊಡಗಿತು. ಆರಂಭದ ದಿನ ಕಿಲೋಗೆ 90 ರೂನಂತೆ ಮಾರಿತು. ಬಳಿಕ 80 ರೂಗೆ ಬೆಲೆ ಇಳಿಸಿತು. ಈಗ ಸಬ್ಸಿಡಿ ದರ ಹೆಚ್ಚಿಸಿದ ಪರಿಣಾಮ ಟೊಮೆಟೋವನ್ನು 70 ರೂಗೆ ಇಳಿಸಿ ಮಾರಲಾಗುತ್ತಿದೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಈ ಸೀಸನ್​ನಲ್ಲಿ ಟೊಮೆಟೋ ಹೆಚ್ಚು ಬೆಳೆಯಲಾಗುತ್ತಿದೆ. ಸರ್ಕಾರದಎನ್​ಸಿಸಿಎಫ್ ಮತ್ತು ಎನ್​ಎಎಫ್​ಇಡಿ ಸಂಸ್ಥೆಗಳು ಈ ರಾಜ್ಯಗಳ ವಿವಿಧ ಮಂಡಿಗಳಿಂದ ಟೊಮೆಟೋ ಖರೀದಿಸಿ ತಮ್ಮ ರೀಟೇಲ್ ಔಟ್​ಲೆಟ್​ಗಳಲ್ಲಿ ಸಬ್ಸಿಡಿ ದರದಲ್ಲಿ ಮಾರುತ್ತಿವೆ.

ಅಕ್ಟೋಬರ್​ವರೆಗೂ ದೇಶಾದ್ಯಂತ ಟೊಮೆಟೋ ಬೆಲೆ ತುಸು ಹೆಚ್ಚಿನ ಮಟ್ಟದಲ್ಲೇ ಇರಲಿದೆ. ಅದಾದ ಬಳಿಕ ಟೊಮೆಟೋ ಸರಬರಾಜು ಹೆಚ್ಚುವುದರಿಂದ ಬೆಲೆ ಸಹಜವಾಗಿ ಇಳಿಕೆಯಾಗುವ ಸಾಧ್ಯತೆ ಇದೆ.