ಲಂಕಾ- ಪಾಕ್, ಭಾರತ- ಬಾಂಗ್ಲಾ ನಡುವೆ ಸೆಮಿಫೈನಲ್ ಫೈಟ್; ಗೆದ್ದವರಿಗೆ ಫೈನಲ್ ಟಿಕೆಟ್

ಉದಯೋನ್ಮುಖ ಏಷ್ಯಾಕಪ್​ನಲ್ಲಿ ಇಂದು ಅಂದರೆ, ಜುಲೈ 21 ರ ಶುಕ್ರವಾರದಂದು ಸೆಮಿಫೈನಲ್ ಪಂದ್ಯಗಳು ನಡೆಯುತ್ತಿವೆ. ಇಂದಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡ, ಶ್ರೀಲಂಕಾ ಎ ತಂಡವನ್ನು ಎದುರಿಸುತ್ತಿದ್ದರೆ, ಇಂದೇ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ತಂಡ, ಬಾಂಗ್ಲಾದೇಶ ಎ ತಂಡವನ್ನು ಎದುರಿಸುತ್ತಿದೆ. ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತ  ತನ್ನ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ತಾನ ತಂಡ ಎರಡನೇ ಸ್ಥಾನದಲ್ಲಿದೆ. ಇತ್ತ ಶ್ರೀಲಂಕಾ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಸೆಮಿಫೈನಲ್‌ನಲ್ಲಿ ಎದುರಾಳಿಗಳಿಗಿಂತ ಹೆಚ್ಚು ಬಲಿಷ್ಠರಾಗಿರುವ ಕಾರಣ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್‌ನ ನಿರೀಕ್ಷೆಯೂ ಹೆಚ್ಚಾಗಿದೆ.

ಇನ್ನು ಲೀಗ್ ಹಂತದಲ್ಲಿ ಪಾಕ್ ತಂಡದ ಪ್ರದರ್ಶನವನ್ನು ನೋಡುವುದಾದರೆ, ನೇಪಾಳ ಮತ್ತು ಯುಎಇ ವಿರುದ್ಧ ತನ್ನ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಪಾಕ್ ಯಶಸ್ವಿಯಾಗಿತ್ತು. ಆದರೆ ಟೀಂ ಇಂಡಿಯಾ ವಿರುದ್ಧ 8 ವಿಕೆಟ್​ಗಳ ಹೀನಾಯ ಸೋಲು ಕಂಡಿತು. ಇನ್ನೊಂದೆಡೆ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿದ್ದಲ್ಲದೆ, ಲೀಗ್​ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಪಾರುಪತ್ಯ ಮೆರೆದಿದೆ. ಹೀಗಾಗಿ ಗುಂಪು ಹಂತದಲ್ಲಿ ತಲಾ ಒಂದೊಂದು ಪಂದ್ಯ ಸೋತಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ನಿರೀಕ್ಷೆಯಿದ್ದರೂ ಪಂದ್ಯದಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ.

ಟೀಂ ಇಂಡಿಯಾವೇ ಗೆಲ್ಲುವ ಫೆವರೆಟ್

ಮತ್ತೊಂದೆಡೆ, ದಿನದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಬಾಂಗ್ಲಾದೇಶ ತಂಡ ಎದುರಿಸುತ್ತಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನ, ನೇಪಾಳ ಮತ್ತು ಯುಎಇ ವಿರುದ್ಧ ಗೆಲುವು ಸಾಧಿಸಿರುವ ಟೀಂ ಇಂಡಿಯಾವೇ ಈ ಪಂದ್ಯದ ಗೆಲ್ಲುವ ಫೆವರೇಟ್ ಎನಿಸಿಕೊಂಡಿದೆ. ನಾಯಕ ಯಶ್ ಧುಲ್, ಓಪನರ್ ಸಾಯಿ ಸುದರ್ಶನ್, ನಿಕಿನ್ ಜೋಸ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದೇಶ ಈ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಸೋಲಿನೊಂದಿಗೆ ಅಭಿಯಾನ ಆರಂಭಿಸಿ ನಂತರ, ಓಮನ್ ಮತ್ತು ಅಫ್ಘಾನ್ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

ಭಾರತ- ಪಾಕ್ ನಡುವೆ ಫೈನಲ್ ಫೈಟ್?

ಪ್ರಸ್ತುತ ತಂಡಗಳ ಬಲಾಬಲ ನೋಡುವುದಾದರೆ, ಭಾರತ ಮತ್ತು ಪಾಕಿಸ್ತಾನ ಫೈನಲ್ ಆಡುವ ಲಕ್ಷಣಗಳು ಹೆಚ್ಚಿವೆ. ಇದುವರೆಗೆ ಉಭಯ ತಂಡಗಳು ಒಮ್ಮೆ ಮಾತ್ರ ಪ್ರಶಸ್ತಿ ಗೆದ್ದಿವೆ. ಟೀಂ ಇಂಡಿಯಾ ಉದಯೋನ್ಮುಖ ಏಷ್ಯಾಕಪ್‌ನಲ್ಲಿ ಮೊದಲ ವಿಜೇತರಾಗಿದ್ದು, ಈ ಹಿಂದೆ ಪಾಕಿಸ್ತಾನ ಪ್ರಶಸ್ತಿ ಗೆದ್ದಿತ್ತು. ಎರಡೂ ತಂಡಗಳು ಫೈನಲ್‌ನಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, 2013ರಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಎ ತಂಡ ಪಾಕಿಸ್ತಾನವನ್ನು 9 ವಿಕೆಟ್‌ಗಳಿಂದ ಸೋಲಿಸಿತ್ತು. ಅಂದಿನ ಪಾಕ್ ತಂಡದಲ್ಲಿ ಮೊಹಮ್ಮದ್ ರಿಜ್ವಾನ್, ಬಾಬರ್ ಆಜಮ್, ಮೊಹಮ್ಮದ್ ನವಾಜ್ ಮುಂತಾದ ಆಟಗಾರರಿದ್ದರು.