ಮಂಗಳೂರು, ಜು.21: ರಾಜ್ಯದಲ್ಲಿ ಮಾದಕವಸ್ತು ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಇದೀಗ ಮಂಗಳೂರಿನಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಹೈಲ್ಯಾಂಡ್ ಬಳಿಯ ಅಂಗಡಿಯಲ್ಲಿ ಬಾಂಗ್ ಮಿಶ್ರಿ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್(45), ಹಾಗೂ ಮಂಗಳೂರಿನ ಮನೋಹರ್ ಶೇಟ್(49) ಎಂಬಿಬ್ಬರನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಂಗಳೂರು ದಕ್ಷಿಣ ಮತ್ತು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಚಾಕೋಲೇಟ್ ಒಳಗೆ ಕಿಕ್ ಕೊಡೊ ಡ್ರಗ್ಸ್
ಇನ್ನು ಆರೋಪಿಯಾದ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್ ತನ್ನ ಗೂಡಂಗಡಿಯಲ್ಲಿ 5,500 ಮೌಲ್ಯದ “ಮಹಾಶಕ್ತಿ ಮುನಕ್ಕಾ”, “ಬಮ್ ಬಮ್ ಮುನಕ್ಕಾ ವಟಿ” “ಪಾವರ್ ಮುನಕ್ಕಾ ವಟಿ” ಹಾಗೂ “ಆನಂದ ಚೂರ್ಣ ಎಂದು ನಮೂದು ಇರುವ ಚಾಕೊಲೇಟ್ಗಳಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ. ಇತ್ತ ನಗರದ ಕಾರ್ ಸ್ಟ್ರೀಟ್ ಬಳಿ ಉತ್ತರ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿ, ಬಾಂಗ್ ಮಿಶ್ರಿತ ಚಾಕೋಲೇಟ್ನ್ನು ಮಾರಾಟ ಮಾಡುತ್ತಿದ್ದ ಆರೋಪಿ ಮನೋಹರ್ ಶೇಟ್ ಸಹಿತ, ಮೂರು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಇಟ್ಟಿದ್ದ ಸುಮಾರು 48,000 ಮೌಲ್ಯದ ಚಾಕೋಲೇಟ್ನ್ನ ವಶಕ್ಕೆ ಪಡೆದು, ಚಾಕೊಲೇಟ್ಗಳನ್ನು ಲ್ಯಾಬ್ಗೆ ಕಳುಹಿಸಿದ್ದಾರೆ.