ನ್ಯೂಝಿಲೆಂಡ್ ಟಿ20 ತಂಡ ಪ್ರಕಟ: ಕನ್ನಡಿಗನಿಗೆ ಸ್ಥಾನ

ಇಂಗ್ಲೆಂಡ್ಮತ್ತು ಯುಎಇ ವಿರುದ್ಧದ ಟಿ20 ಸರಣಿಗಾಗಿ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಆಗಸ್ಟ್ 17 ರಿಂದ ಯುಎಇ ವಿರುದ್ಧ ಶುರುವಾಗಲಿರುವ 3 ಪಂದ್ಯಗಳ ಟಿ20 ಸರಣಿಯಿಂದ ಡೆವೊನ್ ಕಾನ್ವೆ, ಫಿನ್ ಅಲೆನ್, ಡೇರಿಲ್ ಮಿಚೆಲ್, ಇಶ್ ಸೋಧಿ ಸೇರಿದಂತೆ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಇನ್ನು ಈ ಆಟಗಾರರು ಆಗಸ್ಟ್ 30 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇತ್ತ ಪ್ರಮುಖ ಆಟಗಾರರ ಅನುಪಸ್ಥಿತಿಯ ಹಿನ್ನಲೆಯಲ್ಲಿ ಯುಎಇ ವಿರುದ್ಧದ ಸರಣಿಗಾಗಿ ಯುವ ಆಲ್​ರೌಂಡರ್ ಆದಿತ್ಯ ಅಶೋಕ್​ಗೆ ಸ್ಥಾನ ನೀಡಲಾಗಿದೆ. ಆದಿತ್ಯ ಅಶೋಕ್ ಮೂಲತಃ ಚೆನ್ನೈನವರು. ಬಾಲ್ಯದಲ್ಲಿ ಅವರ ಕುಟುಂಬವು ನ್ಯೂಝಿಲೆಂಡ್‌ಗೆ ತೆರಳಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಇದೀಗ ನ್ಯೂಝಿಲೆಂಡ್ ಪರ ಚೊಚ್ಚಲ ಪಂದ್ಯವಾಡಲು ಸಜ್ಜಾಗಿದ್ದಾರೆ.

ಕಿವೀಸ್ ಬಳಗದಲ್ಲಿ ಕನ್ನಡಿಗ:

ಈ ಸರಣಿಗಳಿಗೆ ಆಯ್ಕೆಯಾದ ಆಟಗಾರರಲ್ಲಿ ಕನ್ನಡಿಗ ರಚಿನ್ ರವೀಂದ್ರ ಕೂಡ ಇರುವುದು ವಿಶೇಷ. ಈ ಹಿಂದೆಯೇ ನ್ಯೂಝಿಲೆಂಡ್ ತಂಡದ ಪಾದಾರ್ಪಣೆ ಮಾಡಿದ ರಚಿನ್ ಅವರ ಪೋಷಕರು ಬೆಂಗಳೂರು ಮೂಲದವರು. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ದಂಪತಿ 1990 ರಲ್ಲಿ ನ್ಯೂಝಿಲೆಂಡ್​ಗೆ ತೆರಳಿದ್ದರು. ಅಲ್ಲದೆ ಅಲ್ಲಿನ ಪೌರತ್ವ ಪಡೆಯುವ ಮೂಲಕ ಅಲ್ಲಿಯೇ ನೆಲೆಸಿದ್ದರು.

ಇತ್ತ ರಚಿನ್ ರವೀಂದ್ರ 2016 ರ ಹಾಗೂ 2018ರ ಅಂಡರ್-19 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ಮೂಲಕ ನ್ಯೂಝಿಲೆಂಡ್ ಪರ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಅಲ್ಲದೆ 2021 ರಲ್ಲಿ ನ್ಯೂಝಿಲೆಂಡ್ ಹಿರಿಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು.

ನ್ಯೂಝಿಲೆಂಡ್ ಪರ ಈಗಾಗಲೇ 3 ಟೆಸ್ಟ್, 5 ಏಕದಿನ ಹಾಗೂ 14 ಟಿ20 ಪಂದ್ಯಗಳನ್ನಾಡಿರುವ ರಚಿನ್ ರವೀಂದ್ರ ಇದೀಗ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಯುಎಇ ಪ್ರವಾಸಕ್ಕಾಗಿ ನ್ಯೂಝಿಲೆಂಡ್ ತಂಡ:

ಟಿಮ್ ಸೌಥಿ (ನಾಯಕ), ಚಾಡ್ ಬೋವ್ಸ್, ಮಾರ್ಕ್ ಚಾಪ್‌ಮನ್, ಡೇನ್ ಕ್ಲೀವರ್, ಲಾಕಿ ಫರ್ಗುಸನ್, ಡೀನ್ ಫಾಕ್ಸ್‌ಕ್ರಾಫ್ಟ್, ಕೈಲ್ ಜೇಮಿಸನ್, ಕೋಲ್ ಮೆಕ್‌ಕಾಂಚಿ, ಜಿಮ್ಮಿ ನೀಶಮ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಹೆನ್ರಿ ಶಿಪ್ಲಿ, ಎಡಿ ಯಂಗ್.