ನವದೆಹಲಿ, ಜುಲೈ 20: ಟೊಮೆಟೋ ಬೆಲೆ ಬಹಳ ಕಡೆ ಇನ್ನೂ ಕಡಿಮೆ ಆಗಿಲ್ಲ. ದೆಹಲಿ ಎನ್ಸಿಆರ್ ಇತ್ಯಾದಿ ಪ್ರದೇಶಗಳಲ್ಲಿ ಸರ್ಕಾರವೇ ಟೊಮೆಟೋವನ್ನು ರಿಯಾಯಿತಿ ಬೆಲೆಗೆ ಮಾರುತ್ತಿದೆ. ಇದಕ್ಕಾಗಿ ಟೊಮೆಟೋ ಹೆಚ್ಚು ಬೆಳೆಯುವ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಮಂಡಿಗಳಿಂದ ಟೊಮೆಟೊಗಳನ್ನು ಖರೀದಿಸಿ, ದುಬಾರಿ ಬೆಲೆ ಇರುವ ಪ್ರದೇಶಗಳಲ್ಲಿ ಮಾರಲಾಗುತ್ತಿದೆ. ಅದಕ್ಕಾಗಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ.
ಹಲವು ಕಡೆ ಟೊಮೆಟೋ ಬೆಲೆ ಈಗಲೂ 200 ರೂ ಮೇಲೆಯೇ ಇದೆ. ಟೊಮೆಟೋ ಬೆಲೆ ದುಬಾರಿ ಇರುವ ಪ್ರದೇಶಗಳಲ್ಲಿ ಅಲ್ಲಿನ ಮಾರುಕಟ್ಟೆ ಬೆಲೆಗಿಂತ ಶೇ. 30ರಷ್ಟು ಕಡಿಮೆ ದರದಲ್ಲಿ ಟೊಮೆಟೋವನ್ನು ಸಹಕಾರಿ ಸಂಘಗಳ ಮಳಿಗೆಗಳು ಹಾಗೂ ವಾಹನಗಳ ಮೂಲಕ ಮಾರಾಟವಾಗುತ್ತಿದೆ.
ಭಾರತದ ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಟೊಮೆಟೋ ಬೆಳೆಯಲಾಗುತ್ತದೆ. ಆದರೆ, ಅಧಿಕ ಪ್ರಮಾಣದಲ್ಲಿ ಟೊಮೆಟೋ ಬೆಳೆಯುವುದು ಭಾರತದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ. ಅದರಲ್ಲೂ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಟೊಮೆಟೋ ಬೆಳೆಯಲಾಗುತ್ತದೆ. ಇಲ್ಲಿಯ ಹೆಚ್ಚುವರಿ ಟೊಮೆಟೋಗಳು ಬೇರೆ ಬೇರೆ ರಾಜ್ಯಗಳಿಗೆ ವಿತರಣೆ ಆಗುತ್ತವೆ. ಇದರಿಂದ ಟೊಮೆಟೋ ಬೆಳೆಗಾರರಿಗೆ ಬೆಲೆಕುಸಿತದ ಸಂಭವ ಕಡಿಮೆ ಆಗುತ್ತದೆ. ಉತ್ತಮ ಬೆಲೆ ಕೂಡ ಸಿಗುವ ಸಾಧ್ಯತೆ ಇರುತ್ತದೆ. ಈ ಸೀಸನ್ನಲ್ಲಿ ಒಳ್ಳೆಯ ಟೊಮೆಟೋ ಫಸಲು ಪಡೆದ ರೈತರಿಗೆ ಕೈತುಂಬ ಹಣ ಸಿಕ್ಕಿರುವುದು ಹೌದು.
ಟೊಮೆಟೋ ಹಣ್ಣಿನ ಬೆಲೆ ಒಂದು ವರ್ಷದಲ್ಲಿ ದುಬಾರಿ ಎನಿಸುವುದು ಮೂರ್ನಾಲ್ಕು ತಿಂಗಳು ಮಾತ್ರ. ಜುಲೈ, ಆಗಸ್ಟ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಟೊಮೆಟೋ ಆವಕ ಕಡಿಮೆ ಆಗುವುದರಿಂದ ಆ ಸಂದರ್ಭದಲ್ಲಿ ಟೊಮೆಟೋ ಬೆಲೆ ಹೆಚ್ಚು ಇರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಅದರ ಬೆಲೆ ಸಾಕಷ್ಟು ತಗ್ಗುವ ನಿರೀಕ್ಷೆ ಇದೆ.
ಟೊಮೆಟೋ ಹಣ್ಣನ್ನು ಹೆಚ್ಚು ದಿನ ಶೇಖರಿಸಿಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಗ್ರಹದ ಮೂಲಕ ಬೆಲೆ ನಿಯಂತ್ರಣ ಕಷ್ಟಸಾಧ್ಯ. ಟೊಮೆಟೋ ಬೆಳೆಯುವ ರೈತರಿಗೂ ಒಂದು ರೀತಿಯಲ್ಲಿ ಅನಿಶ್ಚಿತತೆ ಕಾಡುತ್ತದೆ. ಈಗ ಟೊಮೆಟೋಗೆ ಒಳ್ಳೆಯ ಬೆಲೆ ಸಿಕ್ಕಿದೆ ಎಂದು ಮುಂದಿನ ತಿಂಗಳೂ ಉತ್ತಮ ಬೆಲೆ ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಅತಿಯಾಗಿ ಟೊಮೆಟೋ ಆವಕವಾಗಿ ಚೀಲಕ್ಕೆ ಹತ್ತಿಪ್ಪತ್ತು ರುಪಾಯಿ ಬೆಲೆಗೆ ಕುಸಿದುಹೋಗುವುದುಂಟು. ಅಂಥ ಸಂದರ್ಭದಲ್ಲಿ ಟೊಮೆಟೋ ಬೆಳೆಗಾರರು ಲಕ್ಷಾಂತರ ರೂ ನಷ್ಟ ಮಾಡಿಕೊಂಡು ಪರದಾಡುವುದುಂಟು.