ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮಾಡಿ ಮೆರವಣಿ ಮಾಡಿದ ವಿಡಿಯೋ ಕಿಚ್ಚು ಹೊತ್ತಿಸಿದ್ದು, ಈ ಸಂಬಂಧ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಗ್‌ಪೊಕ್ಪಿ(ಮಣಿಪುರ), (ಜುಲೈ 20): ಹಿಂಸಾಚಾರ ಪೀಡಿತ ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇ 4ರಂದು ನಡೆದಿದ್ದ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು, ಪ್ರಕರಣ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಹೆರದಾಸ್​(32 ಬಂಧಿತ ಆರೋಪಿ. ಹಸಿರು ಟಿ-ಶರ್ಟ್​ ಧರಿಸಿದ್ದ ಹೆರದಾಸ್ ಎನ್ನುವ ಆರೋಪಿಯನ್ನು ವಿಡಿಯೋನಲ್ಲಿ ಗುರುತಿಸಿ ತೌಬಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಮಹಿಳೆಯರ ಬೆತ್ತಲೆ‌ ಮೆರವಣಿಗೆ ಮಾಡಿ ವಿಕೃತಿ‌ ಮೆರೆದ ವಿಡಿಯೋವನ್ನು ಹಂಚಿಕೊಳ್ಳದಂತೆ‌ ಟ್ವಿಟರ್​ಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಟ್ವೀಟರ್ ಸೇರಿ ವಿವಿಧ ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸೂಚಿಸಿದೆ.

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆಗೊಳಿಸಿ ಮೆರವಣಿಗೆ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಸಿಜೆ, ಈ ಸಂಬಂಧ ವರದಿ ನೀಡುವಂತೆ ಕೇಂದ್ರ, ಮಣಿಪುರ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಸೂಚನೆ ಕೊಟ್ಟಿದ್ದಾರೆ.

ಕ್ರಮ ಕೈಗೊಳ್ಳುವಂತೆ ಅಮಿತ್ ಶಾ ಸೂಚನೆ

ಇನ್ನು ಮಣಿಪುರದಲ್ಲಿ ಮಹಿಳೆಯರ ಬೆತ್ತಲೆಗೊಳಿಸಿ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಮಿತ್ ಶಾ , ಮಣಿಪುರ ಸಿಎಂ ಬಿರೇನ್ ಸಿಂಗ್​​ಗೆ ಶಾ ದೂರವಾಣಿ ಕರೆ ಪ್ರಕರಣ ಮಾಹಿತಿ ಪಡೆದುಕೊಂಡಿದ್ದು, ತಪ್ಪಿತಸ್ಥರ‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ

ಮಹಿಳೆಯರ ಬೆತ್ತಲೆಗೊಳಿಸಿದ ಪ್ರಕರಣಕ್ಕೆ ಮೋದಿ ಖಂಡಿಸಿದ್ದು, ಇದು ಇಡೀ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಈ ಘಟನೆಯಿಂದ ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆಯಾಗಿದ್ದು, ಈ ಘಟನೆ ತುಂಬಾ ನೋವುಂಟು ಮಾಡಿದೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮವಾಗುತ್ತೆ, ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಈ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ನನ್ನ ಹೃದಯ ನೋವು ಮತ್ತು ಕೋಪದಿಂದ ತುಂಬಿದೆ. ಮಣಿಪುರದ ಘಟನೆ ಯಾವುದೇ ಸುಸಂಸ್ಕೃತ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ. ಎಲ್ಲಾ ಸಿಎಂಗಳು ತಮ್ಮ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು. ವಿಶೇಷವಾಗಿ ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜಸ್ಥಾನ, ಮಣಿಪುರ ಅಥವಾ ಛತ್ತೀಸ್‌ಗಢ ದೇಶದ ಯಾವುದೇ ಮೂಲೆಯಲ್ಲಿ ಇರಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ದೇಶಿಯ ಬುಡಕಟ್ಟು ನಾಯಕರ ವೇದಿಕೆ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯ ದಿನವೇ ಈ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಮೈದಾನದಲ್ಲಿ ಸಾಮೂಹಿಕ ಅತ್ಯಾಚಾರ ಬಳಿಕ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಆರೋಪ ಕೇಳಿಬಂದಿದೆ. ಮಹಿಳೆಯರನ್ನು ಕರೆದೊಯ್ಯುವ ವೇಳೆ ಖಾಸಗಿ ಅಂಗಾಂಗ ಮುಟ್ಟಿ ದೌರ್ಜನ್ಯ ಎಸಗಲಾಗಿದ್ದು, ಇದೊಂದು ಪೈಶಾಚಿಕ ಕೃತ್ಯ ಎಂಬ ಆಕ್ರೋಶ ವ್ಯಕ್ತವಾಗಿದೆ.