ಖಾನಾಪುರದಲ್ಲಿ ವರುಣನ ಆರ್ಭಟ: ‌40 ಗ್ರಾಮ ಸಂಪರ್ಕ ಕಡಿತ, 83 ಸಂಪರ್ಕ ಸೇತುವೆಗಳ ಮೇಲೆ ಜಿಲ್ಲಾ ಪೊಲೀಸರ ನಿಗಾ

ಬೆಳಗಾವಿ, ಜುಲೈ 20: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದ ಹಾಲತ್ರಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಖಾನಾಪುರ ತಾಲೂಕಿನ ಅಶೋಕ ನಗರದ ಬಳಿ ಪ್ರವಾಹ ಭೀತಿ ಎದುರಾಗಿದ್ದು ಸೇತುವೆ ಮುಳುಗುವ ಆತಂಕ ಎದುರಾಗಿದೆ. ಸೇತುವೆ ಮುಳುಗಿದರೆ 40 ಹಳ್ಳಿಗಳಿಗೆ ಸಂಪರ್ಕ ಕಡಿತಗೊಳ್ಳಲಿದೆ.

ಸೇತುವೆ ಮುಳುಗಿದರೆ ಹೆಮ್ಮಡಗಾ, ಅಶೋಕ ನಗರ, ಗವಾಳಿ, ಪಾಸ್ತೊಳಿ ಸೇರಿದಂತೆ 40 ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳಲಿದೆ. ಸೇತುವೆ ಮುಳುಗಡೆಗೆ ಕೇವಲ ಅರ್ಧ ಅಡಿಯಷ್ಟೇ ನೀರು ಬಾಕಿ ಇದೆ. ಸೇತುವೆಯ ಎತ್ತರ ಹೆಚ್ಚಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಬೆಳಗಾವಿ ಜಿಲ್ಲೆ ಏಳು ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿ ಸೇರಿ ಏಳು ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳ ಮೇಲೆ ನಿಗಾ ಇಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ 83 ಸಂಪರ್ಕ ಸೇತುವೆಗಳ ಮೇಲೆ ಜಿಲ್ಲಾ ಪೊಲೀಸರು ನಿಗಾ‌‌ ಇಟ್ಟಿದ್ದಾರೆ. ನಗರಕ್ಕೆ, ಗ್ರಾಮಗಳಿಗೆ ಸಂಪರ್ಕಿಸುವ ಸೇತುವೆ ಮುಳುಗುವ ಭೀತಿ ಹಿನ್ನೆಲೆ ಆಯಾ ಠಾಣಾ ಪೊಲೀಸರು ನದಿ, ಹಳ್ಳಕ್ಕೆ ಕಟ್ಟಿರುವ ಸೇತುವೆ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ತಿಳಿಸಿದ್ದು ನದಿಗಳ ಮೇಲೆ ಎಚ್ಚರಿಕೆಯಿಂದ ಓಡಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಖಾನಾಪುರ ತಾಲೂಕು ಬೆಳಗಾವಿಯ ಜಿಲ್ಲಾ ಕೇಂದ್ರದಿಂದ 30 ಕಿಲೋಮೀಟರ್ ದೂರದಲ್ಲಿದೆ ಮತ್ತು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿದೆ. ಇಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಈ ಭಾಗದ ನಾಗರಗಾಳಿ, ಗುಂಜಿ, ಲೋಂಡಾ, ಹೆಮ್ಮಡಗಾ, ನೇರಸೆ, ನಿಲವಡೆ, ಜಾಂಬೋಟಿ ಮತ್ತು ಕಣಕುಂಬಿ ಗ್ರಾಮಗಳು ಮಳೆಯಿಂದ ಹೆಚ್ಚು ಹಾನಿಗೊಳಗಾಗಿದ್ದು, ಇಲ್ಲಿನ ನಿವಾಸಿಗಳು ಸಮೀಪದ ಪಟ್ಟಣಗಳು ಮತ್ತು ಖಾನಾಪುರದ ತಾಲೂಕು ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ, ಜಲಾವೃತವಾಗಿರುವ ರಸ್ತೆಗಳ ಎರಡೂ ತುದಿಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದಟ್ಟ ಅರಣ್ಯ ಪ್ರದೇಶದಲ್ಲಿರುವ ನೂರಾರು ಹಳ್ಳಿಗಳು ಪ್ರತಿ ಮಳೆಗಾಲದಲ್ಲಿ ಸುಮಾರು ಪಟ್ಟಣಗಳೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುತ್ತವೆ ಮತ್ತು ಕಳೆದ ನಾಲ್ಕು ದಿನಗಳಿಂದ ಇದೇ ರೀತಿಯ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯು ನಮ್ಮ ಮೇಲೆ ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ ಏಕೆಂದರೆ ಇದು ಪ್ರತಿ ಮುಂಗಾರು ಮಳೆಯ ಸಮಯದಲ್ಲಿ ನಮಗೆ ಸಾಮಾನ್ಯವಾಗಿದೆ. ಮುಂಗಾರು ಆರಂಭಕ್ಕೂ ಮುನ್ನ ನಾಲ್ಕು ತಿಂಗಳ ಕಾಲ ಅಗತ್ಯ ವಸ್ತುಗಳನ್ನು ಶೇಖರಿಸಿಡುತ್ತೇವೆ’ ಎಂದು ತಾಲೂಕು ಕೇಂದ್ರ ಖಾನಾಪುರದಿಂದ ಸುಮಾರು 25 ಕಿ.ಮೀ ದೂರದ ಅರಣ್ಯದಲ್ಲಿ ವಾಸಿಸುವ ಕೃಷಿಕ ದೊಂಡಿಬಾ ಪಾಟೀಲ ಎಂಬವವರು ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ನಂ. 4ಎಯಲ್ಲಿ ಮಂಗಳವಾರ ರಾತ್ರಿ ದೊಡ್ಡ ಮರವೊಂದು ರಸ್ತೆಗೆ ಬಿದ್ದಿದ್ದು, ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಮರವನ್ನು ತೆಗೆದು ರಸ್ತೆಯನ್ನು ತೆರವುಗೊಳಿಸಲು ಸುಮಾರು ಒಂದು ಗಂಟೆ ಬೇಕಾಯಿತು. ಅದೃಷ್ಟವಶಾತ್, ಮರವು ಜನರು ಅಥವಾ ಬಸ್‌ಗಳ ಮೇಲೆ ಬಿದ್ದಿಲ್ಲ.

ಸತತ ಮಳೆಯಿಂದಾಗಿ ತಾಲೂಕಿನ ಮಲಪ್ರಭಾ, ಮಹದಾಯಿ, ಪಂಡರಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದ ಹಬ್ಬನಹಟ್ಟಿಯ ಆಂಜನೇಯ ದೇವಸ್ಥಾನ, ಇಟಗಿ ಗ್ರಾಮದ ಮರಳು ಶಂಕರ ದೇವಸ್ಥಾನಗಳು ಜಲಾವೃತವಾಗಿವೆ. ಜೊತೆಗೆ, ಮಲಪ್ರಭಾ ಮತ್ತು ಪಂಡರಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಹಲವಾರು ಸೇತುವೆಗಳು ಸಹ ಮುಳುಗಿವೆ.

ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚೋರ್ಲಾ ಗ್ರಾಮದ ಸಮೀಪವಿರುವ ಜಲಪಾತ ವಲಯಕ್ಕೆ ಜನರು ಪ್ರವೇಶಿಸದಂತೆ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ.