ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ, ಪ್ಲೇಸ್ ಮೆಂಟ್ ಸೆಲ್, ಇಂಗ್ಲಿಷ್ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ಪೋಕನ್ ಇಂಗ್ಲಿಷ್ ಹಾಗೂ ಬ್ಯುಟಿಷಿಯನ್ ಸರ್ಟಿಫಿಕೆಟ್ ಕೋರ್ಸ್ ಗಳಿಗಾಗಿ ಪಟ್ಟಣದ “ಮಾತೃಭೂಮಿ ಸೇವಾ ಪ್ರತಿಷ್ಠಾನದ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ, ಇಂದಿನ ದಿನಗಳಲ್ಲಿ ಪಠ್ಯಕ್ರಮ ಅಷ್ಟೇ ಅಲ್ಲದೇ ವಿವಿಧ ಕೌಶಲಗಳನ್ನು ಕಲಿತುಕೊಳ್ಳಬೇಕಿದೆ. ಸರ್ಕಾರಿ ಕೆಲಸಗಳ ಮೇಲೆ ಅವಲಂಬಿತರಾಗದೇ ಇಂತಹ ಕೋರ್ಸ್ ಗಳ ಮೂಲಕ ಸ್ವಂತ ಉದ್ಯೋಗ ಮಾಡಬಹುದಾಗಿದೆ ಎಂದರು.
ನಿಷಾ ಬ್ಯೂಟಿ ಪಾರ್ಲರ್ ನ ನಿಷಾ ನಾಯ್ಕ ಮಾತನಾಡಿದರು. ಪ್ಲೇಸ್ ಮೆಂಟ್ ಸೆಲ್ ಸಂಚಾಲಕಿ ಸುರೇಖಾ ತಡವಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಆರ್.ಡಿ. ಜನಾರ್ಧನ್ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಕುರಿತಾಗಿ ವಿವರಿಸಿದರು.
ಪ್ರಾಂಶುಪಾಲ ಡಿ.ಎಸ್.ಭಟ್ಟ, ಐಕ್ಯುಎಸಿ ಸಂಚಾಲಕ ಡಿ.ಜಿ. ತಾಪಸ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಶರತ್ ಕುಮಾರ್, ವ್ಯವಸ್ಥಾಪಕ ಎನ್.ಬಿ. ಮೆಣಸುಮನೆ, ಮಹಿಳಾ ವೇದಿಕೆ ಸಂಚಾಲಕಿ ಸವಿತಾ ನಾಯ್ಕ ಇತರರಿದ್ದರು.
ಮ್ಯಾನೆಜ್‌ಮೆಂಟ್ ಅಕೌಂಟಿಂಗ್ ವಿಷಯದಲ್ಲಿ ಶೇ.100 ಅಂಕಗಳನ್ನು ಗಳಿಸಿದ ತೃತೀಯ ಬಿ.ಕಾಂ. ನ ೨೦ ವಿದ್ಯಾರ್ಥಿಗಳಿಗೆ ಉಪನ್ಯಾಸಕ ಶರತ್ ಕುಮಾರ್ ಬಹುಮಾನ ನೀಡಿ ಅಭಿನಂದಿಸಿದರು. ವೇದಾ ಭಟ್ಟ, ವೀಣಾ ಭಟ್ಟ, ಕೀರ್ತಿ ಮರಾಠಿ ಕಾರ್ಯಕ್ರಮ ನಿರ್ವಹಿಸಿದರು.