ವಿಜಯಪುರ, ಜುಲೈ 19: ಬೆಂಗಳೂರಿನಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಹಿನ್ನೆಲೆ ರಾಜ್ಯದ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅಲರ್ಟ್ ಆದ ಪೊಲೀಸ್ ಇಲಾಖೆ, ರೈಲು ನಿಲ್ದಾಣದಲ್ಲಿ ಬಾಂಬ್ ಪತ್ತೆ ದಳ, ಶ್ವಾನದಳದಿಂದ ತಪಾಸಣೆ ಮಾಡಲಾಗಿದೆ. ಜೊತೆಗೆ ರೈಲ್ವೆ ಪ್ರಯಾಣಿಕರ ಬ್ಯಾಗ್‌ಗಳನ್ನು ಸಹ ಪರಿಶೀಲಿಸಿದ್ದಾರೆ. ಇದರ ಮಧ್ಯೆ ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದು, 15 ದಿನ ವಶಕ್ಕೆ ನೀಡಲಾಗಿದೆ.
ತನಿಖಾಧಿಕಾರಿ ಎಸಿಪಿ ಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟ್ಗೆ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಆವರಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಸಿಸಿಬಿ ಪೊಲೀಸರಿಗೆ ಸಿಎಂ ಸಿದ್ಧರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಸಂಭವಿಸಬಹುದಾಗಿದ್ದ, ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಅಭಿನಂದನೆಗಳು.
ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಯಾವುದೇ ತೆರನಾದ ದೇಶವಿರೋಧಿ ಚಟುವಟಿಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ, ಬೇರು ಸಮೇತ ಅಂತಹ ಶಕ್ತಿಗಳನ್ನು ರಾಜ್ಯದಿಂದ ಕಿತ್ತೊಗೆಯಲು ನಾವು ಸದಾ ಸಿದ್ಧರಿದ್ದೇವೆ. ನಾಡಿನ ಪ್ರತಿಯೊಬ್ಬರೂ ಸುರಕ್ಷತೆಯ ಬದುಕು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಕೆಲವರು ಬೇಲ್ ಮೇಲೆ ಬಿಡುಗಡೆಯಾಗಿ ವಿಚಾರಣೆ ಎದುರಿಸ್ತಿದ್ದಾರೆ. ಕೆಲವರು ಕೊಲೆ, ದರೋಡೆ ಸೇರಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಯಾವ ಸಂಘಟನೆ ಜತೆ ಗುರುತಿಸಿಕೊಂಡಿದ್ದರು ಎಂಬ ಬಗ್ಗೆ ತನಿಖೆ ತಿಳಿಯಬೇಕಾಗಿದೆ ಎಂದರು.
ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದ್ದು, ಈ ಜಾಲವು ಬಹಳ ಆಳವಾಗಿದೆ ಅಂತಾ ಅಂದುಕೊಂಡಿದ್ದೇನೆ. ಇನ್ನೊಬ್ಬ ಉಗ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ತನಿಖೆಯನ್ನು NIAಗೆ ವಹಿಸುವುದು ಸೂಕ್ತ ಎಂದು ಭಾವಿಸುತ್ತೇನೆ. ಬೆಂಗಳೂರಲ್ಲಿ ಹಲವು ಕಡೆ ಬಾಂಬ್ ಸ್ಫೋಟಕ್ಕೆ ಸಂಚು ಮಾಡಿದ್ದಾರೆ. ಕಾಂಗ್ರೆಸ್ಸಿಗರು ಮನಪರಿವರ್ತನೆ ಮಾಡಿಕೊಳ್ಳಿ ಎಂದು ವಿನಂತಿಸುವೆ. ದಯಮಾಡಿ ರಾಜ್ಯದ ಹಿತದ ಹಿನ್ನಲೆಯಲ್ಲಿ ಉದಾರತೆ ತೋರಿಸಿ ಎಂದು ಹೇಳಿದ್ದಾರೆ.