ದಾಂಡೇಲಿ : ತಾಲ್ಲೂಕಿನ ಕುಳಗಿ ವನ್ಯಜೀವಿ ವಲಯದ ಆಶ್ರಯದಡಿ ಕುಳಗಿ ಪ್ರಕೃತಿ ಶಿಬಿರದಲ್ಲಿ ಕೆನರಾ ವೃತ್ತ ಮಟ್ಟದ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗಾಗಿ ಹಾವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿಯವರು ಉದ್ಘಾಟಿಸಿ ಮಾತನಾಡುತ್ತಾ, ಕೆನರಾ ವೃತ್ತ ಅತ್ಯಂತ ಸಂಪದ್ಬರಿತವಾದ ದಟ್ಟ ಕಾಡುಗಳನ್ನೊಳಗೊಂಡ ವೃತ್ತವಾಗಿದ್ದು, ಇಲ್ಲಿ ವಿವಿಧ ಜಾತಿಯ ಹಾವುಗಳಿವೆ. ಹಾವುಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ ಅತೀ ಅಗತ್ಯವಾಗಿ ಮಾಹಿತಿ ಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಗಾರ ಔಚಿತ್ಯಪೂರ್ಣ ಮತ್ತ್ಣುರ್ಥಪೂರ್ಣವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂಧೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮರಾಕ್ಷರ.ವಿ.ಎಂ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ರಾಹುಲ್ ಆರಾಧ್ಯ, ಇಮ್ರಾನ್ ಪಟೇಲ್, ಮಧುಸೂದನ್.ಎಸ್ ಅವರುಗಳು ಹಾವುಗಳ ವಿಧಗಳು, ವಿಷಕಾರಿ ಹಾಗೂ ವಿಷರಹಿತ ಹಾವುಗಳ ಬಗ್ಗೆ, ಅವುಗಳನ್ನು ಗುರುತಿಸುವ ಬಗ್ಗೆ, ಹಾವಿನ ವಿಷದ ವಿಧಗಳು, ಅವುಗಳಿಂದಾಗುವ ಪರಿಣಾಮಗಳು, ವಿಷದಲ್ಲಿರುವ ಕಿಣ್ವಗಳು, ಪ್ರತಿರೋಧಕ ವಿಷ ತಯಾರಿಕೆಯ ವಿಧಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಗಾರದಲ್ಲಿ ಕೆನರಾ ವೃತ್ತ ಮಟ್ಟದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಉಪ ವಲಯಾರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು, ಉರಗ ಸಂರಕ್ಷಕ ಹಾಗೂ ಆಸಕ್ತ ಸಿಬ್ಬಂದಿಗಳು ಭಾಗವಹಿಸಿದ್ದರು. ವಲಯಾರಣ್ಯಾಧಿಕಾರಿ ಮಹಾಂತೇಶ್ ಪಾಟೀಲ್ ಸ್ವಾಗತಿಸಿ, ವಂದಿಸಿದರು.