ದಾವಣಗೆರೆ: ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದೆ ಚರಂಡಿ ಸ್ವಚ್ಚಗೊಳಿಸುವಾಗ ವಿಷಗಾಳಿ ಸೇವಿಸಿ ಸತ್ಯಪ್ಪ(45), ಮೈಲಪ್ಪ(49) ಎಂಬ ಇಬ್ಬರು ಕಾರ್ಮಿಕರರು ಸಾವನ್ನಪ್ಪಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ಇದೀಗ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ ತಲಾ 1 ಲಕ್ಷ ರೂಪಾಯಿ ಸಹಾಯ ಧನ ವಿತರಣೆ ಮಾಡಲಾಗಿದೆ. ಹೌದು ಮೃತರ ಮನೆಗಳಿಗೆ ತೆರಳಿದ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅವರು ಇದೀಗ ಪರಿಹಾರದ ಚೆಕ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಈಗಾಗಲೇ ಗ್ರಾಮ ಪಂಚಾಯತಿಯಿಂದ ಮೃತರ ಕುಟುಂಬಗಳಿಗೆ ಸಹಾಯ ನೀಡಲಾಗಿದೆ. ಬರುವ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಆ ಕುಟುಂಬಗಳಿಗೆ ಕಲ್ಪಿಸುವುದಾಗಿ ಶಾಸಕ ದೇವೇಂದ್ರಪ್ಪ ಭರವಸೆ ನೀಡಿದ್ದಾರೆ.
ಮಾರ್ಚ್ 21ರಂದು ಮೃತ ಪೌರ ಕಾರ್ಮಿಕರಿಗೆ ಯುಗಾದಿ ಹಬ್ಬದ ಹಿನ್ನೆಲೆ ಬಸವನಕೋಟೆ ಗ್ರಾಮ ಪಂಚಾಯತಿ ಪಿಡಿಒ ಶಶಿಧರ್ ಪಾಟೀಲ್ ಎಂಬುವವರು ಚರಂಡಿ ಸ್ವಚ್ಛಗೊಳಿಸಲು ಆದೇಶ ನೀಡಿದ್ದರು. ಅದರಂತೆ ಹಲವು ದಿನಗಳಿಂದ ತುಂಬಿದ್ದ ಚರಂಡಿಯ ಸ್ವಚ್ಚತೆಗೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಕಾರ್ಮಿಕರು ಮುಂದಾಗಿದ್ದರು. ಹೀಗೆ ಚರಂಡಿ ಸ್ವಚ್ಚಗೊಳಿಸುವಾಗ ವಿಷ ಗಾಳಿ ಸೇವಿಸಿ ಅಸ್ವಸ್ಥರಾಗಿದ್ದು, ಕೂಡಲೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಇಬ್ಬರು ಪೌರಕಾರ್ಮಿಕರು ಸಾವನ್ನಪ್ಪಿದ್ದರು. ಇಬ್ಬರ ಕುಟುಂಬಗಳು ಅನಾಥವಾಗಿತ್ತು
ಈ ರ್ದುಘಟನೆಯಿಂದ ಮನೆಯವರು ಆಘಾತಕ್ಕೀಡಾಗಿದ್ದರು. ಅಧಿಕಾರಿಗಳು ಹೇಳಿದ್ದ ಕೆಲಸ ಮಾಡಲು ಹೋಗಿ ಅಮಾಯಕ ಎರಡು ಜೀವ ಬಲಿಯಾಗಿತ್ತು. ಹಲವು ದಿನಗಳಿಂದ ಚರಂಡಿಯಲ್ಲಿ ಸರಾಗವಾಗಿ ನೀರು ಮುಂದೆ ಹರಿದುಹೋಗದ ಕಾರಣ ಅಪಾರ ಪ್ರಮಾಣದ ತ್ಯಾಜ್ಯ ಕಟ್ಟಿಕೊಂಡು ಕೊಳೆತಿದ್ದು, ಇದರಿಂದ ವಿಷಕಾರಿ ರಾಸಾಯನಿಕ ಉತ್ಪತ್ತಿಯಾಗಿತ್ತು. ತೆರೆದ ಚರಂಡಿಯಲ್ಲಿ ಇಳಿದಿದ್ದ ಕಾರ್ಮಿಕರು ತಾಸುಗಟ್ಟಲೆ ಬಗ್ಗಿ ತ್ಯಾಜ್ಯ ಹೊರ ತೆಗೆಯುವ ಸಮಯದಲ್ಲಿ ವಿಷ ಗಾಳಿ ಸೇವಿಸಿದ ಇಬ್ಬರೂ ಅಸ್ವಸ್ಥರಾಗಿ, ಸಾವನ್ನಪ್ಪಿದ್ದರು.