ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ ಸ್ವಾಗತಿಸಿದ ಬೈಂದೂರಿನ ಬಿಜೆಪಿ ಶಾಸಕ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯನ್ನು ಬೈಂದೂರಿನ ಬಿಜೆಪಿ ಶಾಸಕ ಗುರುರಾಜ್ ಗಂಟಿಹೋಳಿ ಸ್ವಾಗತಿಸಿದರು.

ವಿಧಾನಸಭೆಯಲ್ಲಿಂದು ಕಾಂಗ್ರೆಸ್ ಸರ್ಕಾರದ ಬಜೆಟ್ ಮೇಲೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ವಿರೋಧ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಗುರುರಾಜ್ ಗಂಟಿಹೋಳಿ, ಅನ್ನಭಾಗ್ಯ ಯೋಜನೆಯನ್ನ ಸ್ವಾಗತಿಸಿದರು. ಯೋಚನೆ ಮತ್ತು ಯೋಜನೆ ರೂಪಿಸಿದವರಿಗೆ ಅಭಿನಂದನೆ, ಬಡವರ ಹೊಟ್ಟೆ ತುಂಬಿಸುವ ಯೋಜನೆ. ಯಾವುದೇ ಸರ್ಕಾರ ಈ ಯೋಜನೆ ಜಾರಿ ಮಾಡಿರಲಿ, ನಾನು ಸ್ವಾಗತ ಮಾಡುತ್ತೇನೆ ಎಂದು ನುಡಿದರು.

ನಂತರ ಮಾತನಾಡಿದ ಬಿಜೆಪಿ ಸದಸ್ಯ ಬಿ.ವೈ ವಿಜಯೇಂದ್ರ, ಸಿದ್ದರಾಮಯ್ಯ ಅನುಭವಿ ಸಿಎಂ, ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಆದ್ರೆ ಸದನವನ್ನ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಲು ಬಳಸಿಕೊಂಡಿದ್ದಾರೆ. ಪ್ರಧಾನಿ ಮೋದಿ 140 ಕೋಟಿ ಜನರನ್ನ ಪ್ರತಿನಿಧಿಸುತ್ತಾರೆ. ಅವರನ್ನ ನಾವು ಗೌರವಿಸಬೇಕು. ಕಾಂಗ್ರೆಸ್ 5 ಗ್ಯಾರಂಟಿ ಜಾರಿಗೆ ಯಾವ ಮೂಲಗಳಿಂದ ಹಣ ಕ್ರೋಢೀಕರಣದ ಬಗ್ಗೆ ಹೇಳಿಲ್ಲ. ಅಬಕಾರಿ ತೆರಿಗೆ ಹೆಚ್ಚಳದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹಾಗಾದ್ರೆ ಇದರ ಪರಿಣಾಮ ಏನಾಗಬಹುದು? ಗ್ರಾಮೀಣ ಭಾಗದಲ್ಲಿ ಕಳ್ಳ ಭಟ್ಟಿ ತಯಾರಿಸಲು ಅವಕಾಶ ಆಗುತ್ತದೆ. ಇದರಿಂದ ಬಡವರ ಮೇಲೆ ಪರಿಣಾಮ ಬೀರಲಿದೆ. ಇದನ್ನ ಸಿಎಂ ಸಿದ್ದರಾಮಯ್ಯ ಗಮನಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಬಜೆಟ್‌ನಲ್ಲಿ ಇಲಾಖಾವರು ಹಣ ಕಡಿತಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿ ಇಲಾಖೆಗೂ ಹಣ ಕಡಿತಗೊಳಿಸಲಾಗಿದೆ. ಅಭಿವೃದ್ಧಿ ಪರವಾಗಿ ಬಜೆಟ್ ಮಂಡನೆ ಆಗಿಲ್ಲ. ಕೇವಲ ಗ್ಯಾರಂಟಿಗಳ ಜಾರಿಗಾಗಿ ಅಭಿವೃದ್ಧಿ ಕುಂಟಿತಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕರಾದ ಶಿವಲಿಂಗೇಗೌಡ ಹಾಗೂ ಕೋನರಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು. ಸ್ಪೀಕರ್ ಖಾದರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.