ಸರ್ಕಾರದ ಆದೇಶದ ವಿರುದ್ಧ ಆದೇಶ ಮಾಡುವ ಅಧಿಕಾರ ನನಗಿಲ್ಲ: ಜಿಲ್ಲಾಧಿಕಾರಿ‌ ಪ್ರಭುಲಿಂಗ್ ಕವಳಿ ಕಟ್ಟಿ

ಕುಮಟಾ : ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ, ವಾಹನ ಸವಾರರು ಸಾರ್ವಜನಿಕರು ಚಲಿಸುವ ಮಾರ್ಗವಾಗಿ ಉಳಿದಿಲ್ಲ. ಇದನ್ನು ಯಮಲೋಕದ ಹಾದಿ ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ತಂಡ ಐಆರ್‌ಬಿ ಕಂಪನಿಯು ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆಗೆ ಆಗಮಿಸಿದ ವೇಳೆ ಶನಿವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡುವ ಸಂದರ್ಭದಲ್ಲಿ ಐಆರ್‌ಬಿ ಕಂಪನಿಯವರು ಕೈಗೊಂಡ ಕಾರ್ಯ ಹಾಗೂ ಆಗಿರುವ ಸಮಸ್ಯೆಗಳನ್ನು ಸಾರ್ವಜನಿಕರು ಸವಿಸ್ತಾರವಾಗಿ ವಿವರಿಸಿದರು.
ಪಟ್ಟಣದ ಗಿಬ್ ಸರ್ಕಲ್ ಸನಿಹ ಜಿಲ್ಲಾಧಿಕಾರಿಗಳ ಆಗಮನಕ್ಕಾಗಿ ಕಾದು ಕುಳಿತಿದ್ದ ಜನರು, ಜಿಲ್ಲಾಧಿಕಾರಿಗಳು ಹಾಗು ಅಧಿಕಾರಿಗಳು ಬಸ್‌ನಿಂದ ಇಳಿಯುತ್ತಿದ್ದಂತೆ ಅವರ ಸನಿಹಕ್ಕೆ ತೆರಳಿ ಕಾಮಗಾರಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಲು ಪ್ರಾರಂಭಿಸಿದರು. ವಿವಿಧ ಸಂಘಟನೆಯ ಪ್ರಮುಖರು ಹಾಗೂ ಸಾರ್ವಜನಿಕರು ಐಆರ್‌ಬಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೆದುರಲ್ಲಿಯೇ ಐಆರ್‌ಬಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಚತುಷ್ಪತ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ನಾವು ಅನೇಕ ಬಾರಿ ಮನವಿ ನೀಡಿದ್ದೇವೆ. ಪಕ್ಷಾತೀತವಾಗಿ ನಾವು ಹೋರಾಟವನ್ನೂ ಮಾಡಿದ್ದೇವೆ. ಆದರೆ ಯಾವುದೇ ಜನಪ್ರತಿನಿಧಿಗಳಾಗಲಿ ಸಂಸದರಾಗಲಿ ನಮ್ಮ ಮನವಿಗೆ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ. ಯಾವ ಕ್ರಮಕ್ಕೂ ಮುಂದಾಗಿಲ್ಲ. ಇದೀಗ ಸಚಿವರು ಸಹಕಾರ ನೀಡಿದ್ದಾರೆ. ಮೂರು ವರ್ಷ ಗತಿಸಿದರೂ ಗುತ್ತಿಗೆ ಪಡೆದ ಕಂಪನಿಯವರು ಕಾಮಗಾರಿ ಪೂರ್ಣಗೊಳಿಸಿಲ್ಲ. ಕಾಮಗಾರಿ ಮುಗಿಯುವವರೆಗೆ ಟೋಲ್ ಸಂಗ್ರಹ ನಿಲ್ಲಿಸಲೇಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ೯೦ % ರಷ್ಟು ಪೂರ್ಣವಾಗಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಕುಮಟಾದಲ್ಲಿಯೂ ಕಾಮಗಾರಿಗೆ ಯಾವುದೇ ತೊಡಕುಗಳಿಲ್ಲ ಆದರೂ ಕಾಮಗಾರಿ ಮುಂದೆ ಹೋಗುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿಯಲ್ಲಿಯೇ ನೀರು ನಿಲ್ಲುತ್ತಿದೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಸಂಕಷ್ಟ ಎದುರಾಗುತ್ತಿದೆ. ಮನೆಯ ಆಸರೆಯಾದ ವ್ಯಕ್ತಿಯನ್ನು ಕಳೆದುಕೊಂಡ ಸಂದರ್ಭದಲ್ಲಿಯೇ, ನೀರು ನುಗ್ಗಿ ಶವವನ್ನು ಹೊರ ತರಲೂ ಅಗ್ನಿಶಾಮಕ ದಳದವರು ಸಹಾಯ ನೀಡುವ ಪರಿಸ್ಥಿತಿ ಬಂದಿದೆ ಎಂದರೆ ಇದು ಹೆದ್ದಾರಿಯ ಕರ್ಮಕಾಂಡವನ್ನು ಪ್ರತಿನಿಧಿಸುತ್ತದೆ ಎಂದು ಗುಡುಗಿದರು.
ಜನರ ಹಿತದ ದೃಷ್ಟಿಯಿಂದ ನಾವು ಈ ಹಿಂದೆಯೂ ಹೋರಾಟಕ್ಕೆ ಮುಂದಾಗಿದ್ದೆವು. ಆದರೆ ಐಆರ್‌ಬಿ ಕಂಪನಿಯವರು ಜನರ ಬಗ್ಗೆ, ಜನರ ಜೀವದ ಬಗ್ಗೆ ಬೆಲೆ ಇಲ್ಲದಂತೆ ಈ ಹಿಂದಿನಿಂದಲೂ ವರ್ತಿಸಲಾಗುತ್ತಿದೆ. ಟೋಲ್ ಮೂಲಕ ಜನರ ಸುಲಿಗೆ ಮಾಡಲಾಗುತ್ತಿದೆ. ಹೀಗಾಗಿ ಕೂಡಲೇ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು ಕಾಮಗಾರಿ ಪೂರ್ಣಗೊಳಿಸಿದ ನಂತರ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು ಈ ನಿಟ್ಟಿನಲ್ಲಿ ಸಚಿವರು ಕ್ರಮ ಕೈಗೊಳ್ಳುತ್ತಾರೆ ಎಂದು ನಮಗೆ ಭರವಸೆ ಇದೆ ಎಂದು ಅವರು ಹೇಳಿದರು.

ಆ ಸಂದರ್ಭದಲ್ಲಿ ಹಾಜರಿದ್ದ ಅನೇಕ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಹಾಗೂ ಐಆರ್‌ಬಿ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಗೈದರು. ಜನರ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸರ್ಕಾರದ ಆದೇಶದ ವಿರುದ್ಧ ಆದೇಶ ಮಾಡುವ ಅಧಿಕಾರ ನನಗಿಲ್ಲ. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಿರುವ ಕಾರ್ಯ ನಾನು ಮಾಡುತ್ತೇನೆ. ಟೋಲ್ ಬಂದ್ ಮಾಡುವ ಹಾಗೂ ಕಾಮಗಾರಿಯ ಸಮಸ್ಯೆಗಳ ಬಗ್ಗೆ ಮುಂದಿನ ಹಂತಕ್ಕೆ ಸಂಬಂಧಿಸಿದವರ ಗಮನಕ್ಕೆ ತಂದು ಮುಂದುವರಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಗಣೇಶ ಭಟ್ಟ ಬಗ್ಗೋಣ, ಉದ್ಯಮಿಗಳಾದ ಹರೀಶ ಶೇಟ್, ರಾಜು ಮಾಸ್ತಿಹಳ್ಳ, ದತ್ತು ಪಟಗಾರ, ಸತೀಶ ಮಹಾಲೆ, ಶ್ರೀಧರ ನಾಯ್ಕ, ಯಶವಂತ ಗೌಡ, ಸಚಿನ್ ನಾಯ್ಕ, ಸುದರ್ಶನ ಶಾನಭಾಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.