ಇಂದು ವಿಪಕ್ಷಗಳ ಸಭೆಗೆ ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಗೈರು

ಬೆಂಗಳೂರು, (ಜುಲೈ 17): ಕಾಂಗ್ರೆಸ್‌ ನೇತೃತ್ವದಲ್ಲಿ 24 ರಾಜಕೀಯ ಪಕ್ಷಗಳು ಇಂದು (ಜುಲೈ 17) ಬೆಂಗಳೂರಿನಲ್ಲಿ ಒಗ್ಗಟ್ಟು ತೋರಿಸಲು ಸಜ್ಜಾಗಿವೆ. ಇಂದು, ನಾಳೆ ನಡೆಯಲಿರುವ ವಿಪಕ್ಷಗಳ ಮಹಾಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಒಬ್ಬರಾದ ಮೇಲೊಬ್ಬ ನಾಯಕರು ಬೆಂಗಳೂರಿಗೆ ಧಾವಿಸಿ ಬರುತ್ತಿದ್ದಾರೆ. ಆದ್ರೆ, ಇಂದು ಜಂಟಿ ವಿರೋಧ ಪಕ್ಷದ ಸಭೆಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಗೈರಾಗಲಿದ್ದಾರೆ. ಶರದ್ ಪವಾರ್ ಗೈರು ಬಗ್ಗೆ ಎನ್‌ಸಿಪಿ ಬಣದ ವಕ್ತಾರರೊಬ್ಬರು ಖಚಿತಪಡಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಕಟ್ಟಿಹಾಕಲೇಬೇಕೆಂದು ದೇಶದ ಪ್ರತಿಪಕ್ಷಗಳೆಲ್ಲ ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ.ಇದಕ್ಕಾಗಿ ಇಂದು (ಜುಲೈ 17) ಬೆಂಗಳೂರಿನಲ್ಲಿ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿವೆ. ಈ ಮೊದಲು ಬಿಹಾರದಲ್ಲಿ ವಿಪಕ್ಷಗಳ ಮಹಾಮೈತ್ರಿಕೂಟದ ಸಭೆ ನಡೆದಿತ್ತು. 15ಪಕ್ಷಗಳ 32ನಾಯಕರು ಪಾಲ್ಗೊಂಡಿದ್ದರು. ಆದ್ರೆ ಕೇಜ್ರಿವಾಲ್ ಸೇರಿ ಹಲವು ನಾಯಕರು ಆ ಸಭೆಗೆ ಕೈಕೊಟ್ಟಿದ್ದರು. ಇನ್ನು ಸಂಚಾಲಕರ ನೇಮಕ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ಹಿಮಾಚಲಪ್ರದೇಶದಲ್ಲಿ ಸಭೆ ಆಯೋಜಿಸಲು ನಿರ್ಧರಿಸಿ ಆ ನಂತರ ಕೈಬಿಡಲಾಗಿತ್ತು. ಇದೀಗ 2ನೇ ಬಾರಿಗೆ ಇಂದು ಮತ್ತು ನಾಳೆ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.. ಈ ಬಾರಿ ಒಟ್ಟು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಆದ್ರೆ, ಶರದ್ ಪವಾರ್ ಪಾಲ್ಗೊಳ್ಳುತ್ತಿಲ್ಲ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇಂದಿನ ಸಭೆಯಲ್ಲಿ ಆರು ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.