ನವದೆಹಲಿ: ಆರ್‌ಸಿಬಿ ತಂಡದಿಂದ ನನ್ನನ್ನು ಕೈ ಬಿಡುವಾಗ ಒಂದು ಫೋನ್ ಕರೆ ಕೂಡ ಮಾಡಿ ಮಾಹಿತಿ ನೀಡಿರಲಿಲ್ಲ. ತಂಡಕ್ಕಾಗಿ ನಾನು 8 ವರ್ಷಗಳ ಕಾಲ ಪಂದ್ಯಗಳನ್ನು ಆಡಿದ್ದೆ ಎಂದು ಯಜುವೇಂದ್ರ ಚಾಹಲ್ ಬೇಸರದ ಸಂಗತಿಯನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.
ಐಪಿಎಲ್ 2023ರ ಹರಾಜಿಗೂ ಮುನ್ನ ಪ್ರಕಟಿಸಿದ ಆಟಗಾರರ ಪಟ್ಟಿಯಲ್ಲಿ ಸ್ಪಿನ್ನರ್ ಯಜುವೇಂದ್ರ ಚಾಹಲ್‍ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿತ್ತು. ಈ ಬಗ್ಗೆ ಯಾವುದೇ ಮಾತುಕತೆ ನಡೆಸಲಿಲ್ಲ. ನಾನು ಆರ್‌ಸಿಬಿಗಾಗಿ 114 ಪಂದ್ಯಗಳನ್ನು ಆಡಿದ್ದೆ ಎಂದು ಚಾಹಲ್ ಹೇಳಿದ್ದಾರೆ.
2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಾಹಲ್ ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿದ್ದರು. ನಂತರ ಆರ್‌ಸಿಬಿ ಕೈಬಿಟ್ಟ ವಿಚಾರದ ಬಗ್ಗೆ ಚಾಹಲ್ ಮಾತನಾಡಿ ಬೇಸರವನ್ನು ಹೊರಹಾಕಿದ್ದಾರೆ.
ಬೆಂಗಳೂರು ತಂಡ ನನ್ನ ಸಾಮರ್ಥ್ಯದ ಪ್ರದರ್ಶನಕ್ಕೆ ಅವಕಾಶ ನೀಡಿತು. ವಿರಾಟ್ ನನ್ನ ಮೇಲೆ ಬಹಳ ನಂಬಿಕೆ ಇಟ್ಟಿದ್ದರು. ನಮ್ಮ ತಂಡ ಕುಟುಂಬದಂತೆ ಇತ್ತು. ಅದರಿಂದ ಹೊರ ಹಾಕಿರುವುದು ಒಂದು ಕೆಟ್ಟ ಅನುಭವವಾಗಿದೆ. ಹರಾಜಿನಲ್ಲಿ ಹೇಗಾದರೂ ಮಾಡಿ ಖರೀದಿ ಮಾಡುತ್ತೇವೆ ಎಂದಿದ್ದರು. ಆದರೆ ಕೈ ಬಿಟ್ಟಾಗ ಬಹಳ ನೋವಾಯಿತು. ಸಿಟ್ಟಿಗೆ ಸಹ ಕಾರಣವಾಯಿತು ಎಂದು ಚಾಹಲ್ ಹೇಳಿಕೊಂಡಿದ್ದಾರೆ.
ಐಪಿಎಲ್ 2023 ರಲ್ಲಿ ಆರ್‌ಸಿಬಿ ವಿರುದ್ಧ ನಾನು ಮೊದಲ ಪಂದ್ಯ ಆಡಿದಾಗ ಆರ್‌ಸಿಬಿ ಕೋಚ್‍ಗಳು ಸೇರಿದಂತೆ ಯಾರೊಂದಿಗೂ ಮಾತನಾಡಲಿಲ್ಲ. ನಿರಂತರವಾಗಿ ಸೋತರೂ ಆರ್‌ಸಿಬಿಯನ್ನು ಕೈಬಿಡದ ಅಭಿಮಾನಿಗಳಿಗಾಗಿ ನಾನು ಸೋತಿದ್ದೇನೆ. ಆರ್‌ಸಿಬಿ ಹಾಗೂ ನನಗೆ ವಿಶೇಷವಾದ ನಂಟಿದೆ. ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಚಾಹಲ್ ಹೇಳಿಕೊಂಡಿದ್ದಾರೆ.