ಬಿಟ್ ಕಾಯಿನ್ ಮರು ತನಿಖೆ – ಎಸ್ಪಿ ಶರತ್ ಹೆಸರು ಕೈಬಿಟ್ಟ ಸರ್ಕಾರ

ಬೆಂಗಳೂರು: ಬಿಟ್ ಕಾಯಿನ್ ಮರು ತನಿಖೆಗೆ ಎಸ್‍ಐಟಿ ರಚನೆ ವಿಚಾರದಲ್ಲಿ ತನಿಖೆಗೂ ಮೊದಲೇ ವಿಘ್ನ ಶುರುವಾಗಿದೆ. ತನಿಖಾ ತಂಡದ ಸದಸ್ಯರ ಹೆಸರನ್ನು ಕೈಬಿಟ್ಟು ಸರ್ಕಾರ ಆದೇಶ ಹೊರಡಿಸಿದೆ. ಎಸ್ಪಿ ಶರತ್ ಅವರನ್ನು ತನಿಖಾ ತಂಡದ ಸದಸ್ಯರ ಪಟ್ಟಿಯಿಂದ ಸರ್ಕಾರ ತೆರವು ಮಾಡಿದೆ.

ಈ ಹಿಂದೆ ಎಸ್ಪಿ ಶರತ್ ವಿರುದ್ಧ ಸಿಸಿಬಿ ತನಿಖಾಧಿಕಾರಿ ಶ್ರೀಧರ್ ಪೂಜಾರ್ ಮತ್ತು ಆಗಿನ ಕಮಿಷನರ್ ಕಮಲ್ ಪಂಥ್ ದೂರು ನೀಡಿದ್ದರು. ಎಸ್‍ಐಟಿ (SIT) ತಂಡ ರಚನೆಯಾದಾಗ ಅಧಿಕಾರಿಗಳಲ್ಲಿ ಸಾಕಷ್ಟು ಅಸಮಾಧಾನ ಸಹ ಇತ್ತು. ಈ ಬಗ್ಗೆ ದಾಖಲೆ ಸಮೇತ `ಪಬ್ಲಿಕ್ ಟಿವಿ’ ಸುದ್ದಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೇ ತನಿಖಾ ತಂಡದಿಂದ ಸರ್ಕಾರ ಆದೇಶ ಮಾಡಿದೆ.

ಬಿಟ್ ಕಾಯಿನ್ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಬಿಡುಗಡೆ ಮಾಡಿದ್ದರು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಬಿಟ್ ಕಾಯಿನ್ ಹಗರಣದ ಮರು ತನಿಖೆಗೆ ಆದೇಶಿಸಿತ್ತು.