ಭಟ್ಕಳ: ಕಳೆದ ಎರಡು ದಿನಗಳಿಂದ ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಗದ್ದುಗೆಯ ಏರಿದ ಸುಪ್ರಸಿದ್ದ ಮಾರಿ ದೇವಿ ಹಬ್ಬವೂ ಗುರುವಾರದಂದು ಸಂಜೆ ಸಾವಿರಾರು ಅಧಿಕ ಭಕ್ತಸಮೂಹದೊಂದಿಗೆ ಭಕ್ತರು
ದೇವಸ್ಥಾನದಿಂದ ಜಾಲಿಕೋಡಿ ಸಮುದ್ರ ತೀರದ ತನಕ ಮಾರಿ ಮೂರ್ತಿಯನ್ನು ಹೊತ್ತು ವಿಸರ್ಜಿಸುವ ಮೂಲಕ ಸುಸಂಪನ್ನಗೊಂಡಿತು.
ಈ ಬಾರಿ ಹಬ್ಬಕ್ಕೆ ಸಹಸ್ರ ಭಕ್ತರನ್ನೊಳಗೊಂಡಂತೆ ಅದ್ದೂರಿಯಾಗಿ ಸಂಭ್ರಮದಿಂದ ನಡೆಸಲಾಯಿತು.
ಬುಧವಾರದಂದು ಮಾರಿಕಾಂಬಾ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡ ಮಾರಿಯಮ್ಮನನ್ನು ಪೂಜಿಸಲಾಗಿತ್ತು. ಗುರುವಾರದಂದು ಮುಂಜಾನೆಯಿಂದಲೇ ಮಾರಿಯಮ್ಮನ ದರ್ಶನಕ್ಕೆ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕು ಜಿಲ್ಲೆಯಿಂದ ಬಂದಂತಹ ಭಕ್ತರ ಸಾಲು ಕಿ.ಮೀ. ಗಟ್ಟಲೇ ನಿಂತು ಹಣ್ಣು ಕಾಯಿ ಮಾಡಿಸಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಎರಡನೇ ದಿನವಾದ ಗುರುವಾರದಂದು ಊರಿನ ಜನ ಹಬ್ಬವನ್ನು ಆಚರಿಸುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬಂದಿದೆ. ತಾಲೂಕಿನ ಗ್ರಾಮದ ಜನರು ಮಾರಿ ದೇವಿಗೆ ಮನೆಯಲ್ಲಿಯೇ ಪ್ರಾರ್ಥಿಸಿ ಕೋಳಿ ಬಲಿ ಮಾಡಿ ಹಬ್ಬವನ್ನು ಆಚರಿಸಿದ್ದಾರೆ.
ಸಂಜೆ 4.30 ರ ಸುಮಾರಿಗೆ ಮಾರಿಯಮ್ಮನಿಗೆ , ಆಡಳಿತ ಮಂಡಳಿ ಸದಸ್ಯರು, ಸ್ವಯಂ ಸೇವಕರು ಹಾಗೂ ಭಕ್ತರನ್ನೊಳಗೊಂಡಂತೆ ಮಹಾಮಂಗಳಾರತಿ ಪೂಜೆಯೊಂದಿಗೆ ವಿಸರ್ಜನಾ ಪೂಜೆ ನೆರವೆರಿಸಲಾಯಿತು.
ಮಾರಿ ದೇವಿಯ ಮೂರ್ತಿಯನ್ನು ಗದ್ದುಗೆಯಿಂದ ಎತ್ತಿಕೊಂಡು ದೇವಸ್ಥಾನದಿಂದ ಹೊರ ತಂದ ಭಕ್ತರು ತಲೆ ಮೇಲೆ ಹೊತ್ತು ಜಯಘೋಷ ಕೂಗುತ್ತ ಮೆರವಣಿಗೆಯಲ್ಲಿ ಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಬಂದರ ರಸ್ತೆಯಿಂದ ಹನುಮಾನ ನಗರ ಕರಿಕಲ್ ಮಾರ್ಗದಲ್ಲಿ ಸಾಗಿ ಬಂದು ಜಾಲಿ ಕೋಡಿ ಸಮುದ್ರ ತೀರದಲ್ಲಿ ವಿಸರ್ಜನೆ ಮಾಡಲಾಯಿತು.
ಇನ್ನು ದಾರಿ ಮಧ್ಯೆ ಇಲ್ಲಿನ ಹನುಮಾನ ನಗರ ದಿಂದ ಸಮುದ್ರ ತೀರದ ತನಕ ಮನೆಯ ಮಂದಿ ಮಾರಿದೇವಿ ಮೆರವಣಿಗೆ ಸಾಗಿ ಬಂದಾಗ ಊರಿನ ಜನರು ರಸ್ತೆಯ ಪಕ್ಕದಲ್ಲಿ ಕೋಳಿ ಬಲಿ ನೀಡಿ ರೋಗ ರುಜನಿಗಲ ನಿರ್ಮೂಲನೆ ಮಾಡುವಂತೆ ಬೇಡಿಕೊಂಡು ದೇವಿಯ ಹೂವಿನ ಪ್ರಸಾದ ಸ್ವೀಕರಿಸಿದರು.
ಬಳಿಕ ಸಮುದ್ರ ತೀರ ತಲುಪಿದ ಮಾರಿ ದೇವಿ ಮೂರ್ತಿಯನ್ನು ಸ್ವಯಂ ಸೇವಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಮಾರಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಜಾಲಿಕೋಡಿ ಸಮುದ್ರ ತೀರಕ್ಕೆ ಕೊಂಡೊಯ್ದು ಅಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಸಕಲ ವಿಧಿವಿಧಾನಗಳ ಮೂಲಕವಿಸರ್ಜಿಸುವದರೊಂದಿಗೆ ಮಾರಿ ಜಾತ್ರೆ ಸಂಪನ್ನಗೊಂಡಿತ್ತು