ಫ್ರಾನ್ಸ್‌ನೊಂದಿಗಿನ ತಮ್ಮ ಹಳೆಯ ಬಾಂಧವ್ಯದ ಬಗ್ಗೆ ಹಂಚಿಕೊಂಡ ಮೋದಿ, ಇದಕ್ಕೆ ಈ ಕಾರ್ಡ್​ ಸಾಕ್ಷಿ

ಪ್ಯಾರಿಸ್: ಎರಡು ದಿನಗಳ ಕಾಲ ಫ್ರಾನ್ಸ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಫ್ರಾನ್ಸ್​ನಲ್ಲಿರುವ ಭಾರತೀಯರ ಜತೆಗೆ ಸಂವಾದ ನಡೆಸಿದ್ದಾರೆ. ಈ ಸಮಯದಲ್ಲಿ ಮೋದಿ ತಮ್ಮ ಮತ್ತು ಫ್ರಾನ್ಸ್​​ನ​​ 40 ವರ್ಷಗಳ ಹಳೆಯ ವೈಯಕ್ತಿಕ ಸ್ನೇಹದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಅಹಮದಾಬಾದ್‌ನಲ್ಲಿ ಅಲಯನ್ಸ್ ಫ್ರಾಂಚೈಸ್ ಸ್ಥಾಪನೆಯ ಕುರಿತು ಮಾತನಾಡಿದ ಅವರು. ನನ್ನ ಮತ್ತು ಫ್ರಾನ್ಸ್​ ಸ್ನೇಹ ತುಂಬಾ ಹಳೆಯದು, ಅದನ್ನು ನಾನು ಎಂದಿಗೂ ಮರೆಯುವುದಿಲ್ಲ, 40 ವರ್ಷಗಳ ಹಿಂದೆ ಫ್ರಾನ್ಸ್‌ನ ಸಾಂಸ್ಕೃತಿಕ ಕೇಂದ್ರವನ್ನು ಪ್ರಾರಂಭಿಸಲಾಯಿತು ಮತ್ತು ಆ ಕೇಂದ್ರದ ಮೊದಲ ಸದಸ್ಯ ಇಂದು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ನನ್ನ ಮತ್ತು ಫ್ರಾನ್ಸ್​​ ಸ್ನೇಹಕ್ಕೆ ಸಾಕ್ಷಿಯಾಗಿದ್ದು ಅಂದು ಫ್ರಾನ್ಸ್‌ನ ಸಾಂಸ್ಕೃತಿಕ ಕೇಂದ್ರ ನನಗೆ ನೀದಿದ ಐಡಿ ಕಾರ್ಡ್​, ಇಂದು ಮತ್ತೆ ನನಗೆ ಕೊಡುಗೆಯಾಗಿ ನೀಡಿ, ಹಳೆಯ ನೆನಪುಗಳನ್ನು ನೆನಪಿಸಿದ್ದಾರೆ. ಅದು ಮೌಲ್ಯಯುತವಾದ ಉಡುಗೊರೆ ಎಂದು ಮೋದಿ ಹೇಳಿದ್ದಾರೆ.

ಭಾರತೀಯರ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತ ಪ್ರಜಾಪ್ರಭುತ್ವದ ತಾಯಿ ಮತ್ತು ವೈವಿಧ್ಯತೆಯ ಮಾದರಿ, ಇದು ನಮ್ಮ ದೊಡ್ಡ ಶಕ್ತಿ” ಎಂದು ಹೇಳಿದರು. ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು, ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಜಗತ್ತು ನಂಬಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾನು ಹಲವಾರು ಬಾರಿ ಫ್ರಾನ್ಸ್‌ಗೆ ಭೇಟಿ ನೀಡಿದ್ದೇನೆ ಆದರೆ ಈ ಬಾರಿ ನನ್ನ ಭೇಟಿ ತುಂಬಾ ವಿಶೇಷವಾಗಿದೆ. ನಾಳೆ ಫ್ರಾನ್ಸ್‌ನ ರಾಷ್ಟ್ರೀಯ ದಿನ. ಈ ಕಾರಣಕ್ಕೆ ನಾನು ಫ್ರಾನ್ಸ್‌ನ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜತೆಗೆ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ನಾನು ಫ್ರಾನ್ಸ್‌ನ ಜನರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇಂದು ಫ್ರೆಂಚ್ ಪ್ರಧಾನಮಂತ್ರಿಯವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು ಮತ್ತು ನಾಳೆ ನಾನು ನನ್ನ ಸ್ನೇಹಿತ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ರಾಷ್ಟ್ರೀಯ ದಿನದಲ್ಲಿ ಭಾಗವಹಿಸಲಿದ್ದೇನೆ. ಇದು ಭಾರತ ಮತ್ತು ಫ್ರಾನ್ಸ್ ನಡುವಿನ ಅವಿನಾಭಾವ ಸ್ನೇಹದ ಪ್ರತಿಬಿಂಬವಾಗಿದೆ ಎಂದು ಹೇಳಿದರು.