ಯುಪಿಐ ಕ್ಯೂಅರ್ ಕೋಡ್​ಗೆ ಡಿಜಿಟಲ್ ರುಪಾಯಿ ಲಿಂಕ್ ಮಾಡಿದ ಮೊದಲ ಬ್ಯಾಂಕ್ ಎಚ್​ಡಿಎಫ್​ಸಿ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್​ಗಳಲ್ಲೊಂದೆನಿಸಿದ ಎಚ್​ಡಿಎಫ್​ಸಿ (HDFC Bank) ಇದೀಗ ಡಿಜಿಟಲ್ ರುಪಾಯಿ ಕರೆನ್ಸಿಯನ್ನು ಯುಪಿಐ ಕ್ಯೂಆರ್ ಕೋಡ್​ಗೆ ಲಿಂಕ್ ಮಾಡಿದೆ. ಈ ರೀತಿ ಮಾಡಿದ ದೇಶದ ಮೊದಲ ಬ್ಯಾಂಕ್ ಎನಿಸಿದೆ. ಆರ್​ಬಿಐ ಬಿಡುಗಡೆ ಮಾಡಿದ ಸಿಬಿಡಿಸಿ (Central Bank Digital Currency) ಅಥವಾ ಇ ರುಪೀ ಅನ್ನು ಯುಪಿಐ ಪಾವತಿಯಂತೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಯುಪಿಐನ ಕ್ಯೂಆರ್ ಕೋಡ್ ಬಳಸಿ ಇರುಪೀ ಪಾವತಿ ಮಾಡಬಹುದು.

ಆರ್​ಬಿಐ ಉಪಗವರ್ನರ್ ಟಿ ರಬಿ ಶಂಕರ್ ಅವರು ಇತ್ತೀಚೆಗೆ ಈ ಬಗ್ಗೆ ಮಾತನಾಡಿ ಡಿಜಿಟಲ್ ಕರೆನ್ಸಿಯ ಯುಪಿಐ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜುಲೈನಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಅದರಂತೆ ಎಚ್​ಡಿಎಫ್​ಸಿ ಬ್ಯಾಂಕ್ ಈ ವ್ಯವಸ್ಥೆ ಅಳವಡಿಸಿದ ಮೊದಲ ಬ್ಯಾಂಕ್ ಎನಿಸಿದೆ.

ಎಚ್​ಡಿಎಫ್​ಸಿ ಬ್ಯಾಂಕ್​ನ ಈ ಯೋಜನೆಗೆ 1 ಲಕ್ಷ ಗ್ರಾಹಕರು ಮತ್ತು 1.7 ಲಕ್ಷ ವರ್ತಕರು ಜೋಡಿಸಿಕೊಂಡಿದ್ದಾರೆ. ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಖಾತೆ ಇರುವ ವರ್ತಕರು ಆ ಬ್ಯಾಂಕ್​ನ ಸಿಬಿಡಿಸಿ ಪ್ಲಾಟ್​ಫಾರ್ಮ್ ಮೂಲಕ ಗ್ರಾಹಕರಿಂದ ಡಿಜಿಟಲ್ ರುಪಾಯಿ ಕರೆನ್ಸಿಯಲ್ಲಿ ಹಣಪಾವತಿ ಸ್ವೀಕರಿಸಬಲ್ಲುರು. ಎಚ್​ಡಿಎಫ್​ಸಿ ಬ್ಯಾಂಕ್ ಸದ್ಯ ಈ ಪ್ರಯೋಗವನ್ನು ಬೆಂಗಳೂರು, ದೆಹಲಿ, ಮುಂಬೈ, ಚಂಡೀಗಡ, ಭುವನೇಶ್ವರ್, ಅಹ್ಮದಾಬಾದ್, ಗುವಾಹಟಿ, ಗ್ಯಾಂಗ್​ಟಕ್ ಮೊದಲಾದ ಕೆಲ ನಗರಗಳಲ್ಲಿ ಚಾಲನೆಗೊಳಿಸಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಸಿಬಿಡಿಸಿ ಪ್ಲಾಟ್​ಫಾರ್ಮ್​ಗೆ ಜೋಡಿಸಿಕೊಂಡಿರುವ ವರ್ತಕರಿಗೆ ವಿಶೇಷ ಕ್ಯುಆರ್ ಕೋಡ್ ಒದಗಿಸುತ್ತದೆ. ಇದನ್ನು ಸ್ಕ್ಯಾನ್ ಮಾಡಿದರೆ ಡಿಜಿಟಲ್ ಕರೆನ್ಸಿ ಜೊತೆಗೆ ಯುವುದೇ ಯುಪಿಐ ವ್ಯಾಲಟ್​ನಿಂದಲೂ ಹಣ ಪಾವತಿಸಬಹುದು.

ಇ ರುಪಾಯಿ ಎಂಬುದು ನಗದು ಹಣದ ಎಲೆಕ್ಟ್ರಾನಿಕ್ ರೂಪ. ನೀವು ಕ್ಯಾಷ್ ಬದಲು ಇ ರುಪಾಯಿ ಇರಿಸಿಕೊಳ್ಳಬಹುದು. ಬ್ಲಾಕ್​ಚೈನ್ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ತಂತ್ರಜ್ಞಾನ ಬಳಸಿ ಸಿಬಿಡಿಸಿಯನ್ನು ಅಭಿವೃದ್ದಿಗೊಳಿಸಲಾಗಿದೆ. ಕ್ಯಾಷ್ ವಹಿವಾಟಿನಂತೆ ಇದರ ವಹಿವಾಟು ಕೂಡ ಆನ್​ಲೈನ್​ನಲ್ಲಿ ಟ್ರ್ಯಾಕ್ ಅಗುವುದಿಲ್ಲ.

ಈಗಾಗಲೇ ಬಹಳಷ್ಟು ಜನರು ಇ ರುಪಾಯಿ ಬಳಸುತ್ತಿದ್ದಾರೆ. ದಿನಕ್ಕೆ 10 ಸಾವಿರದವರೆಗೂ ವಹಿವಾಟು ನಡೆಯುತ್ತಿದೆ. ಇದರ ಪ್ರಮಾಣವನ್ನು ಈ ವರ್ಷದೊಳಗೆ ದಿನಕ್ಕೆ 10 ಲಕ್ಷಕ್ಕೆ ಏರಿಸಬೇಕೆನ್ನುವ ಗುರಿ ಆರ್​ಬಿಐನದ್ದು.