ವಿಶ್ವ ಎಲೆಕ್ಟ್ರಾನಿಕ್ಸ್ ಅಡ್ಡೆಯಾಗಲು ಹೊರಟ ಭಾರತಕ್ಕೆ ಚೀನಾ ಇಟ್ಟಿದೆ ಬಗುಣಿ ಗೂಟ; ಗ್ಯಾಲಿಯಂ, ಜರ್ಮೇನಿಯಂ ರಫ್ತಿಗೆ ನಿರ್ಬಂಧ

ಸೆಮಿಕಂಡಕ್ಟರ್ಗಳು  ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಬಹಳ ಅಗತ್ಯವಾದ ವಸ್ತುಗಳು. ಇಡೀ ವಿಶ್ವ ಒಂದು ವರ್ಷಕ್ಕೆ ಹಲವು ಲಕ್ಷಕೋಟಿಗಳಷ್ಟು ಮೌಲ್ಯದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಳಸುತ್ತದೆ. ಚೀನಾದ ಪ್ರಮುಖ ಆದಾಯದಲ್ಲಿ ಇದೂ ಒಂದು. ಭಾರತ ಕೂಡ ಇದೀಗ ಮಾರುಕಟ್ಟೆ ಅಧಿಪತ್ಯ ಸ್ಥಾಪನೆಗೆ ಪ್ರಯತ್ನ ಆರಂಭಿಸಿದೆ. ಭಾರತದಲ್ಲಿ ಇದೆ ಮೊದಲ ಬಾರಿಗೆ ಸೆಮಿಕಂಡಕ್ಟರ್ ಉತ್ಪಾದನೆ  ಶುರುವಾಗಲಿದೆ. ಗುಜರಾತ್​ನಲ್ಲಿ ಮೈಕ್ರೋನ್ ಸಂಸ್ಥೆ ಸದ್ಯದಲ್ಲೇ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಿ ಉತ್ಪಾದನೆಯನ್ನೂ ಆರಂಭಿಸಲಿದೆ. ಫಾಕ್ಸ್​ಕಾನ್ ಮತ್ತು ವೇದಾಂತ ಕಂಪನಿಗಳು ಜಂಟಿಯಾಗಿ ಇನ್ನೊಂದು ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಿವೆ. ಈ ಘಟಕಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಿದಲ್ಲಿ ಭಾರತ ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಮುಖ ಹೆಜ್ಜೆ ಇರಿಸಿದಂತಾಗುತ್ತದೆ. ಇದೇ ವೇಳೆ, ಭಾರತದ ಓಟಕ್ಕೆ ಚೀನಾ ತೊಡರುಗಾಲು ಹಾಕಲು ಯತ್ನಿಸುತ್ತಿದೆ. ಗ್ಯಾಲಿಯಂ  ಮತ್ತು ಜರ್ಮೇನಿಯಂ  ಎಂಬ ಎರಡು ಲೋಹಗಳು ಹಾಗೂ ಅವುಗಳ ರಾಸಾಯನಿಕ ಸಂಯುಕ್ತಗಳನ್ನು  ಆಗಸ್ಟ್ 1ರಿಂದ ರಫ್ತು ಆಗದಂತೆ ನಿರ್ಬಂಧ ಹೇರುತ್ತಿರುವುದಾಗಿ ಮೊನ್ನೆ (ಜುಲೈ 3) ಚೀನಾ ಘೋಷಣೆ ಮಾಡೇಬಿಟ್ಟಿತು. ಅದು ಕೊಟ್ಟ ಕಾರಣ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆಗುತ್ತದೆ ಎಂದಾಗಿತ್ತು. ಅದೂ ನಿಜವೇ, ಭಾರತ ದ ಸೆಮಿಕಂಡಕ್ಟರ್ ಓಟಕ್ಕೆ ಹೆಚ್ಚು ಧಕ್ಕೆಯಾಗುವುದು ಚೀನಾದ ಹಿತಾಸಕ್ತಿಯೇ.

ಗ್ಯಾಲಿಯಂ ಮತ್ತು ಜರ್ಮೇನಿಯಂ ಲೋಹಗಳು ಸೆಮಿಕಂಡಕ್ಟರ್, ಕಮ್ಯೂನಿಕೇಶನ್ ಉಪಕರಣ ಮತ್ತು ಚಿಪ್ ಇತ್ಯಾದಿ ವಸ್ತುಗಳ ತಯಾರಿಕೆಗೆ ಬೇಕೇ ಬೇಕು. ಸೆಮಿಕಂಡಕ್ಟರ್, ಇಸಿಬಿ, ಎಲ್​ಇಡಿ, ಥರ್ಮೋಮೀಟರ್, ಬ್ಯೋರೋಮೀಟರ್ ಸೆನ್ಸಾರ್ ಇತ್ಯಾದಿಗೆ ಗ್ಯಾಲಿಯಂ ಬಳಕೆ ಆಗುತ್ತದೆ. ಆಪ್ಟಿಕಲ್ ಫೈಬರ್, ಸೋಲಾರ್ ಸೆಲ್, ಕ್ಯಾಮರಾ ಲೆನ್ಸ್ ಇತ್ಯಾದಿ ತಯಾರಿಕೆಗೆ ಜರ್ಮೇನಿಯಂ ಬೇಕು. ಇವು ಸ್ವಂತವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಅಲೂಮಿನಿಯಮ್, ಜಿಂಕ್ ಇತ್ಯಾದಿ ಬೇರೆ ಬೇರೆ ಲೋಹಗಳ ಉಪ–ಉತ್ಪನ್ನವಾಗಿ ಈ ಎರಡು ಲೋಹಗಳಿವೆ.

ಗ್ಯಾಲಿಯಂ ಮತ್ತು ಜರ್ಮೇನಿಯಂ ಲೋಹಗಳನ್ನು ಭಾರತ ಬಹುತೇಕ ಆಮದು ಮಾಡಿಕೊಳ್ಳುತ್ತದೆ. ಸೆಮಿಕಂಡಕ್ಟರ್ ಘಟಕಕ್ಕೆ ಸಾಕಷ್ಟು ಪ್ರಮಾಣದಲ್ಲಿ ಗ್ಯಾಲಿಯಂ ಬೇಕಾಗುತ್ತದೆ.

ಗ್ಯಾಲಿಯಂ ಮತ್ತು ಜರ್ಮೇನಿಯಂ ಪಡೆಯಲು ಭಾರತಕ್ಕೇನು ದಾರಿ?

ಅಲೂಮಿನಾ ಉತ್ಪಾದಿಸುವ ವೇಳೆ ಉಪ–ಉತ್ಪನ್ನವಾಗಿ ಗ್ಯಾಲಿಯಂ ಸಿಗುತ್ತದೆ. ಉತ್ತರಪ್ರದೇಶದ ರೇಣುಕೂಟ ಎಂಬಲ್ಲಿರುವ ಹಿಂಡಾಲ್ಕೋ ಹಾಗು ಒಡಿಶಾದ ನಾಲ್ಕೋ ದಾಮನಜೋಡಿ ಅಲೂಮಿನಾ ರಿಫೈನರಿ ಫ್ಯಾಕ್ಟರಿಯಲ್ಲಿ ಗ್ಯಾಲಿಯಂ ಅನ್ನು ಈ ಹಿಂದೆ ತಯಾರಿಸಲಾಗುತ್ತಿತ್ತು. ಆದರೆ, ಜರ್ಮೇನಿಯಂ ಮಾತ್ರ ಸ್ವಲ್ಪವೂ ಲಭ್ಯ ಇಲ್ಲ.

ಕೇಂದ್ರ ಸರ್ಕಾರ ಈಗ ಬಹಳ ಮಹತ್ವ ಇರುವ ಖನಿಜಗಳನ್ನು ಗುರುತಿಸುವ ಕೆಲಸ ನಡೆಸುತ್ತಿದೆ. 33 ಖನಿಜಗಳ ಪೈಕಿ 17 ಖನಿಜಗಳು ವಿರಳವಾಗಿರುವುದು ಮಾತ್ರವಲ್ಲ, ಆರ್ಥಿಕವಾಗಿ ಮಹತ್ವವೂ ಆಗಿದೆ. ಈ ಪೈಕಿ ತೀರಾ ದುರ್ಲಭ ಇರುವ 7 ಲೋಹಗಳನ್ನು ಗುರುತಿಸಲಾಗಿದೆ. ಇದರಲ್ಲಿ ಜರ್ಮೇನಿಯಂ ಕೂಡ ಒಂದು. ಈ ಎಲ್ಲಾ ಮಹತ್ವದ ಖನಿಜಗಳನ್ನು ಬಳಸಲು ಅನುವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಗಳನ್ನಿಡುತ್ತಿದೆ. ಆದರೆ, ಈ ಪ್ರಯತ್ನ ಎಷ್ಟರಮಟ್ಟಿಗೆ ಫಲ ಕೊಡುತ್ತದೆ? ಕೊಟ್ಟರೂ ಸೆಮಿಕಂಡಕ್ಟರ್ ಘಟಕಗಳ ನಿರ್ವಹಣೆಗೆ ಸರಕುಗಳನ್ನು ಎಲ್ಲಿಂದ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.