ಬಳ್ಳಾರಿ: ಲಾರಿ ಮತ್ತು 2 ಆಟೋಗಳ ಅಪಘಾತದಲ್ಲಿ ಮೃತಪಟ್ಟ 9 ಕುಟುಂಬಗಳಿಗೆ ತಲಾ 2 ಲಕ್ಷ ರೂ. ಚೆಕ್ನ್ನು ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಇಂದು ಹಸ್ತಾಂತರ ಮಾಡಿದರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬಳಿ ಭೀಕರ ದುರಂತ ನಡೆದಿತ್ತು. ಯಾಸ್ಮಿನ್(45), ಶಾಮ್(40), ಉಮೇಶ್(27), ಜಹೀರಾ(16), ಸಪ್ರಾಭೀ(55), ಇಬ್ರಾಹಿಂ(33), ಕೌಸರ್(35) ಮತ್ತು ಸಾಹಿರಾ(5) ಮೃತರು. ಬಕ್ರೀದ್ ಹಬ್ಬದ ಪ್ರಯಕ್ತ ಕುಟುಂಬದವರೆಲ್ಲಾ ಸೇರಿ ಪ್ರವಾಸಕ್ಕೆ ತೆರಳಿದ್ದಾಗ ದುರಂತ ಸಂಭವಿಸಿದೆ.
ಬಕ್ರೀದ ಹಬ್ಬದ ಸಂಭ್ರಮದಲ್ಲಿದ್ದ ಇವರೆಲ್ಲಾ ಬಳ್ಳಾರಿಯ ಹೊಸಪೇಟೆಯ ಟಿಬಿ ಡ್ಯಾಂಗೆ ತೆರಳುತ್ತಿದ್ದರು. ಬಳ್ಳಾರಿಯ ಕೌಲಬಜಾರ ಪ್ರದೇಶದ 25 ನೇ ವಾರ್ಡ 19 ಜನರು 2 ಆ್ಯಪೆ ಆಟೋಗಳಲ್ಲಿ ಹೊಸಪೇಟೆಗೆ ತೆರಳುತ್ತಿದ್ದ ವೇಳೆ ಯಮಸ್ವರೂಪಿಯಾಗಿ ಬಂದ ಬೃಹತ್ತಾದ ಲಾರಿ ಆಟೋಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ 7 ಜನರು ಸಾವನಪ್ಪಿದ್ದರು. 12 ಜನರು ಗಾಯಗೊಂಡಿದ್ದರು.
ಮೃತರೆಲ್ಲಾ ಆಟೋದಲ್ಲಿದ್ದ ಪ್ರಯಾಣಿಕರಾಗಿದ್ದು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಆಟೋಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮಕ್ಕೆ ಬ್ರೀಡ್ಜ್ ಮೇಲಿದ್ದ ಎಲ್ಲರೂ ಕಂದಕಕ್ಕೆ ಕುಸಿದು ಬಿದ್ದಿದ್ದರು. ಘಟನೆಯನ್ನ ನೋಡಿದ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಕೆಲವರನ್ನ ರಕ್ಷಣೆ ಮಾಡಿದ್ದರು. ಘಟನೆಯಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಸಾವನ್ನಪ್ಪಿದ್ದರು.
ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಿಜಯನಗರ ಎಸ್ ಪಿ ಶ್ರೀಹರಿಬಾಬು, ಐಜಿಪಿ ಲೋಕೇಶ, ಹೊಸಪೇಟೆ ಶಾಸಕ ಎಚ್ಆರ್ ಗವಿಯಪ್ಪ ಭೇಟಿ ನೀಡಿ ಗಾಯಾಳುಗಳ ಪರಿಸ್ಥಿತಿ ಅವಲೋಕಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ನಿರ್ದೇಶನದ ಮೇರೆಗೆ ಬಳ್ಳಾರಿ ಉಸ್ತುವಾರಿ ಸಚಿವ ಬಿ ನಾಗೇಂದ್ರ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚ ಘೋಷಣೆ ಮಾಡಿದ್ದರು.