ನಿಮ್ಮ ಮೊಬೈಲ್ ನಂಬರ್ ಹೈಡ್ ಮಾಡಿ: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಉಪಯುಕ್ತವಾದ ಫೀಚರ್

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲೆಕೇಷನ್ ವಾಟ್ಸ್​ಆ್ಯಪ್ ದಿನಕ್ಕೊಂದು ನೂತನ ಫೀಚರ್​ಗಳ ಘೋಷಣೆ ಮಾಡುತ್ತಿದೆ. ಇದರ ಜೊತೆಗೆ ಹೊಸ ಹೊಸ ಆಯ್ಕೆಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಬಹಳ ಉಪಯುಕ್ತವಾದ ಆಯ್ಕೆಯೊಂದನ್ನು ವಾಟ್ಸ್​ಆ್ಯಪ್ ನೀಡಿದೆ. WABetaInfo ಮಾಡಿರುವ ವರದಿಯ ಪ್ರಕಾರ, ಬಳಕೆದಾರರು ಇದೀಗ ಫೋನ್ ನಂಬರ್ ಪ್ರೈವಸಿ ಆಯ್ಕೆಯನ್ನು ಪಡೆದಿದ್ದಾರೆ ಎಂದು ಹೇಳಿದೆ. ವಾಟ್ಸ್​ಆ್ಯಪ್​ನ ನೂತನ ಬೇಟಾ ವರ್ಷನ್ ಅಪ್ಡೇಟ್ ಮಾಡಿದರೆ ಈ ಆಯ್ಕೆ ಸಿಗಲಿದೆ.

ಫೋನ್ ನಂಬರ್ ಪ್ರೈವಸಿ ಫೀಚರ್ ಕಮ್ಯೂನಿಟಿ ಅನೌನ್ಸ್​ಮೆಂಟ್ ಗ್ರೂಪ್​ನಲ್ಲಿ ಕಾಣಸಿಗಲಿದೆ. ಹೆಸರೇ ಸೂಚಿಸುವಂತೆ, ಬಳಕೆದಾರರು ತಮ್ಮ ಮೊಬೈಲ್ ನಂಬರ್ ಅನ್ನು ಕಮ್ಯೂನಿಟಿ ಅನೌನ್ಸ್​ಮೆಂಟ್ ಗ್ರೂಪ್​ನಲ್ಲಿ ಮರೆಮಾಡುವ ಮೂಲಕ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯದೊಂದಿಗೆ, ಅವರ ಫೋನ್ ಸಂಖ್ಯೆಯು ಕಮ್ಯೂನಿಟಿ ಅಡ್ಮಿನ್ ಮತ್ತು ಅವರ ನಂಬರ್ ಅನ್ನು ಸೇವ್ ಮಾಡಿಟ್ಟುಕೊಂಡವರಿಗೆ ಮಾತ್ರ ಗೋಚರಿಸುತ್ತದೆ. ಗ್ರೂಪ್​ನಲ್ಲಿ ಇರುವ ಇತರೆ ಸದಸ್ಯರಿಂದ ತಮ್ಮ ಮೊಬೈಲ್ ಸಂಖ್ಯೆಗಳನ್ನು ಮರೆಮಾಡಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಆದಾಗ್ಯೂ, ಕಮ್ಯೂನಿಟಿ ಅಡ್ಮಿನ್​ಗಳಿಗೆ ಫೋನ್ ಸಂಖ್ಯೆ ಯಾವಾಗಲೂ ಗೋಚರಿಸುತ್ತದೆ. ಜೊತೆಗೆ ಈ ಆಯ್ಕೆ ಗ್ರೂಪ್​ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಕಮ್ಯೂನಿಟಿಗಳಿಗಾಗಿ ಹೊಸ ಫೋನ್ ಸಂಖ್ಯೆ ಗೌಪ್ಯತೆ ವೈಶಿಷ್ಟ್ಯವು ಸದ್ಯ ಕೆಲವು ಬೀಟಾ ಬಳಕೆದಾರರಿಗೆ ಲಭ್ಯವಿದೆ. ಇದು ಸದ್ಯದಲ್ಲೇ ಎಲ್ಲ ಆಂಡ್ರಾಯ್ಡ್ ಮತ್ತು ಐಇಎಸ್ ಬಳಕೆದಾರರಿಗೆ ಅಪ್ಡೇಟ್ ಮಾಡುವ ಮೂಲಕ ಸಿಗಲಿದೆ ಎಂದು ವರದಿ ಆಗಿದೆ.

ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ:

ಸದ್ಯದಲ್ಲೇ ವಾಟ್ಸ್​ಆ್ಯಪ್​ನಲ್ಲಿ ಫಿಲ್ಟರ್ ಆಯ್ಕೆ ಬರಲಿದೆ. ಇದು ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ ತರಲಿದೆ. ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್​ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಮಾಹಿತಿಯ ಪ್ರಕಾರ, ಫಿಲ್ಟರ್​ನಲ್ಲಿ ಮೂರು ಆಯ್ಕೆಗಳು ಇರಲಿದೆ. ಅನ್​ರೀಡ್ ಮೆಸೇಜೆಸ್, ವೈಯಕ್ತಿಕ ಸಂಭಾಷಣೆಗಳು ಮತ್ತು ವ್ಯವಹಾರ ಸಂಭಾಷಣೆಗಳು ಹೀಗೆ ಮೂರು ಆಯ್ಕೆಗಳು ಇರಲಿದೆ. ವಾಟ್ಸ್​ಆ್ಯಪ್​ ಮೇಲ್ಬಾಗದ ಬಲ ಮೂಲೆಯಲ್ಲಿ ಈ ಫಿಲ್ಟನ್ ಬಟನ್ ಇರಲಿದೆ ಎಂದು ಹೇಳಲಾಗಿದೆ. ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ಸೆಕೆಂಡುಗಳಲ್ಲಿ ಪ್ರಮುಖ ಚಾಟ್‌ಗಳನ್ನು ಪ್ರವೇಶಿಸಬಹುದು. ಆದರೆ, ಗ್ರೂಪ್ ಚಾಟ್​ಗಳಿಗೆ ಇದು ಅನ್ವಯ ಆಗುವುದಿಲ್ಲ. ಇದಕ್ಕಾಗಿ ಯಾವುದೇ ಆಯ್ಕೆ ಕಂಡುಬಂದಿಲ್ಲ.