ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ಯುವಬ್ರಿಗೇಡ್ ಕಾರ್ಯಕರ್ತನ ಪತ್ನಿ ಆರೋಪ

ಮೈಸೂರು: ನನ್ನ ಗಂಡ ಹತ್ತು ಜನ ಬಂದರೂ ಹೆದರಲ್ಲ. ನನ್ನ ಗಂಡನ ಹತ್ಯೆ ವೈಯಕ್ತಿಕ ಕಾರಣಕ್ಕೆ ನಡೆದಿಲ್ಲ. ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ ಎಂದು ಯುವ ಬ್ರಿಗೇಡ್ ಕಾರ್ಯಕರ್ತ ದಿವಂಗತ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಆರೋಪಿಸಿದ್ದಾರೆ.

ಮೈಸೂರಿನ ಟಿ.ನರಸೀಪುರದಲ್ಲಿ ಜುಲೈ 8ರಂದು ನಡೆದ ಹನುಮ ಜಯಂತಿ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದ್ದು, ಜಗಳದಲ್ಲಿ ಯುವಬ್ರಿಗೇಡ್ ಸಕ್ರಿಯ ಕಾರ್ಯಕರ್ತನಾಗಿದ್ದ ವೇಣುಗೋಪಾಲ್ ನಾಯಕ್ ಅವರನ್ನು ದುಷ್ಕರ್ಮಿಗಳು ಬಾಟಲಿಯಿಂದ ಇರಿದು ಹತ್ಯೆಗೈದಿದ್ದರು.

ಈ ಕುರಿತು ಮಾತನಾಡಿದ ವೇಣುಗೋಪಾಲ್ ಪತ್ನಿ, ನಾನು, ವೇಣುಗೋಪಾಲ್ ಪ್ರೀತಿಸಿ ಮದುವೆ ಆಗಿದ್ದೆವು. ನಾವು ಮೂರು ವರ್ಷಗಳಿಂದ ಹನುಮ ಜಯಂತಿ ಆಚರಣೆ ಮಾಡುತ್ತಿದ್ದೇವೆ. ನನ್ನ ಗಂಡನ ಬಳಿ ಹಣ ಇಲ್ಲ, ಅಧಿಕಾರ ಇಲ್ಲ. ಆದರೂ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಿದ್ದೆವು. ಅದನ್ನು ಸಹಿಸದೆ ಕೊಲೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ಇಲ್ಲವಾದರೇ ನಾನು ನನ್ನ ಮಗಳು, ಗಂಡ ಸತ್ತಂತೆಯೇ ಸಾಯುತ್ತೇವೆ. ಇಂದು ನನ್ನ ಗಂಡನನ್ನು ಸಾಯಿಸಿದ್ದಾರೆ. ಮುಂದಿನ ವರ್ಷ ನಾನು ಹನುಮ ಜಯಂತಿ ಮಾಡುತ್ತೇನೆ. ಆಗ ನನ್ನನ್ನು ಸಾಯಿಸುತ್ತಾರೆ. ಅದರ ಮುಂದಿನ ವರ್ಷ ನನ್ನ ಮಗಳು ಹನುಮ ಜಯಂತಿ ಮಾಡಿದರೆ ಆಗ ಅವಳನ್ನೂ ಸಾಯಿಸುತ್ತಾರೆ. ಅಲ್ಲಿಗೆ ಹಿಂದೂ ಧರ್ಮವೂ ಸಾಯುತ್ತದೆ. ನನ್ನ ಗಂಡನ ಏಳಿಗೆ ಸಹಿಸದೆ ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.