ಹುಬ್ಬಳ್ಳಿ: ಕಳೆದ ತಿಂಗಳಿನಂತೆ ಈ ಬಾರಿಯೂ ದುಬಾರಿ ವಿದ್ಯುತ್ ಬಿಲ್ ಬಂದಿದ್ದು ಗ್ರಾಹಕರಿಂದ ಹಗಲು ದರೋಡೆಗೆ ಹೆಸ್ಕಾಂ ಇಳಿದಿದ್ಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ಹೌದು. ರಾಜ್ಯಾದ್ಯಂತ ಕಳೆದ ತಿಂಗಳು ಎಲ್ಲಾ ಮನೆಗಳಿಗೆ ದುಬಾರಿ ವಿದ್ಯುತ್ ಬಿಲ್ ಬಂದಿತ್ತು. ದುಬಾರಿ ಬಿಲ್ ಬಂದಿದ್ದು ಯಾಕೆ ಎಂದು ಪ್ರಶ್ನಿಸಿದ್ದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಿದ್ಯುತ್ ದರ ಏರಿಸಿದ್ದರಿಂದ ಜೂನ್ ತಿಂಗಳಿನಲ್ಲಿ ದುಬಾರಿ ಬಿಲ್ ಬಂದಿದೆ. ಮುಂದಿನ ತಿಂಗಳಿನಿಂದ ದುಬಾರಿ ವಿದ್ಯುತ್ ಬಿಲ್ ಬರುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು. ಆದರೆ ಈ ಬಾರಿಯೂ ಗ್ರಾಹಕರಿಗೆ ದುಬಾರಿ ಬಿಲ್ ಬಂದಿದ್ದು, ದುಬಾರಿ ಬಿಲ್ ಯಾಕೆ ಬಂದಿದೆ ಎಂದು ಕೇಳಿದ್ದಕ್ಕೆ ಹೆಸ್ಕಾಂ ಅಧಿಕಾರಿಗಳು ನೀಡುತ್ತಿರುವ ಉತ್ತರದಿಂದ ಹಗಲು ದರೋಡೆ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಈಗ ಎದ್ದಿದೆ.
ಅಧಿಕಾರಿಗಳು ಹೇಳಿದ್ದು ಏನು?
ದುಬಾರಿ ವಿದ್ಯುತ್ ಬಿಲ್ ಯಾಕೆ ಬಂದಿದೆ ಎಂದು ಹಲವು ಗ್ರಾಹಕರು ಹೆಸ್ಕಾಂ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಾಫ್ಟ್‌ವೇರ್ ಸಮಸ್ಯೆ , ಫಿಕ್ಸೆಡ್ ಚಾರ್ಜ್ ಪ್ರತಿ ತಿಂಗಳು ಬದಲಾವಣೆ ಆಗುತ್ತದೆ, ಕೆಇಆರ್‌ಸಿ ಪ್ರತಿ ತಿಂಗಳು ದರ ಬದಲಾವಣೆ ಮಾಡುತ್ತದೆ ಎಂಬ ಉತ್ತರಗಳನ್ನು ನೀಡಿದ್ದಾರೆ.
ಅಧಿಕಾರಿಗಳು ನಿಜವಾಗಿಯೂ ಗ್ರಾಹಕರಿಗೆ ಈ ರೀತಿ ಉತ್ತರ ನೀಡುತ್ತಿದ್ದಾರಾ ಎಂಬುದರ ರಿಯಾಟಲಿಟಿ ಚೆಕ್ ಮಾಡಲು ಗ್ರಾಹಕರ ಸೋಗಿನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಹೆಸ್ಕಾಂ ಶಿವಗಂಗಾ ನಗರದ ಕಚೇರಿಗೆ ತೆರಳಿತ್ತು.
ಹುಬ್ಬಳ್ಳಿಯ ಕೇಶ್ವಾಪುರದ ಗ್ರಾಹಕರಿಗೆ ಈ ಬಾರಿ 688 ರೂ. ವಿದ್ಯುತ್ ಬಿಲ್ ಬಂದಿತ್ತು. ಗ್ರಾಹಕರು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸುತ್ತಿದ್ದರೂ ಈ ತಿಂಗಳ ಬಿಲ್ ನಲ್ಲಿ 25 ರೂ. ಹಿಂಬಾಕಿ ಅಂತ ಬಂದಿತ್ತು. ಈ ಬಿಲ್ ಹಿಡಿದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಪರಿಶೀಲಿಸುವುದಾಗಿ ತಿಳಿಸಿದರು. ಸ್ವಲ್ಪ ಹೊತ್ತಿನ ಬಳಿಕ ಸಾಫ್ಟ್‌ವೇರ್ ಸಮಸ್ಯೆಯಿಂದ 25 ರೂ. ಹೆಚ್ಚುವರಿ ಬಂದಿದೆ ಎಂದು ಹೇಳಿ 25 ರೂ. ಕಳೆದು 664 ರೂ. ನೀಡಿದ್ದಾರೆ.
ಪ್ರಶ್ನೆ ಮಾಡಿದ ಪರಿಣಾಮ ಒಬ್ಬ ಗ್ರಾಹಕರ ಬಿಲ್ ಮೊತ್ತ ಕಡಿಮೆಯಾಗಿದೆ. ಕೆಲ ಗ್ರಾಹಕರು ಬಿಲ್ ಸರಿಯಾದ ಸಮಯಕ್ಕೆ ಪಾವತಿ ಮಾಡುತ್ತಿದ್ದರೂ 300 ರಿಂದ 500 ರೂ. ಹಿಂಬಾಕಿ ಬಂದಿದೆ. ಬಹುತೇಕ ಗ್ರಾಹಕರು ಎಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಬಹುದು ಎಂಬ ಭಯಕ್ಕೆ ಬಿದ್ದು ಈಗಾಗಲೇ ಬಿಲ್ ಕಟ್ಟಿದ್ದಾರೆ. ಇದು ಸಾಫ್ಟ್‌ವೇರ್ ದೋಷದಿಂದ ಬಂದಿರುವ ದುಬಾರಿ ಮೊತ್ತವೇ ಅಥವಾ ಹೆಸ್ಕಾಂ ಸಿಬ್ಬಂದಿ ಮಾಡುತ್ತಿರುವ ಹಗಲು ದರೋಡೆಯೇ ಎಂಬುದರ ಅನುಮಾನ ಎದ್ದಿದ್ದು ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕಿದೆ.