ಚವಡಾಪುರ (ಜು.13) : ಅಫಜಲ್ಪುರ ತಾಲೂಕಿನ ಅರ್ಜುಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಹೊರಾಂಗಣದ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಯ ತಲೆ ಮೇಲೆ ಬಿದ್ದಿದ್ದು 4ನೇ ತರಗತಿ ವಿದ್ಯಾರ್ಥಿ ಪ್ರಮೋದ ದೇವಾನಂದ ದೊಡ್ಮನಿಯ ತಲೆ ಒಡೆದ ಘಟನೆ ನಡೆದಿದೆ.
ವಿದ್ಯಾರ್ಥಿಗಳು ಊಟ ಮಾಡಿದ ಬಳಿಕ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೇಲ್ಛಾವಣಿ ಕುಸಿದು ವಿದ್ಯಾರ್ಥಿ ತಲೆ ಮೇಲೆ ಬೀಳುತ್ತಿದ್ದಂತೆ ಶಾಲೆಯ ಶಿಕ್ಷಕರು ಪಾಲಕರಿಗೆ ಮಾಹಿತಿ ನೀಡಿದ್ದಲ್ಲದೆ ಅಫಜಲ್ಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ವಿದ್ಯಾರ್ಥಿ ಪ್ರಮೋದ್ ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳು ಮೇಲ್ಛಾವಣಿ ಕುಸಿಯುವಾಗ ಕೆಳಗಡೆ ಇರಲಿಲ್ಲ. ಹೀಗಾಗಿ ದೊಡ್ಡ ಅವಾಂತರವೊಂದು ತಪ್ಪಿದಂತಾಗಿದೆ.
ಅರ್ಜುಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಬಹಳ ಹಳೆಯ ಕಾಲದ್ದಾಗಿದ್ದು ಶಿಥಿಲಾವಸ್ಥೆ ತಲುಪಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲೇ ನಿತ್ಯ ಪಾಠ ಬೋಧನೆ ನಡೆಯುತ್ತಿದೆ. ಶಾಲೆಯ ಕಟ್ಟಡ, ಮೇಲ್ಛಾವಣಿ ಕುಸಿದಿರುವ ಬಗ್ಗೆ ಇದರಿಂದ ಮಕ್ಕಳ ಜೀವಕ್ಕೆ ಅಪಾಯ ಆಗಲಿದೆ ಎಂದು 2019ರ ಜೂನ್ 22ರಂದು ‘ಕನ್ನಡಪ್ರಭ’ ಪತ್ರಿಕೆ ವರದಿ ಮಾಡಿ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸಿತ್ತು. ಆದರೆ ಯಾರೊಬ್ಬರೂ ಎಚ್ಚೆತ್ತುಕೊಳ್ಳದಿರುವುದಕ್ಕೆ ಈಗ ವಿದ್ಯಾರ್ಥಿಗಳು ಜೀವ ಭಯದಲ್ಲೇ ನಿತ್ಯ ಪಾಠ ಆಲಿಸುವಂತಾಗಿದೆ. ಮತ್ತೆ ಯಾವಾಗ ಶಾಲೆಯ ಛಾವಣಿ ಕುಸಿದು ಮತ್ಯಾವ ವಿದ್ಯಾರ್ಥಿಯ ತಲೆ ಒಡೆಯುತ್ತದೋ ಎಂದು ಆತಂಕ ಉಂಟಾಗಿದೆ. ಶಾಲೆಯ ಸಮಸ್ಯೆಗಳ ಸರಿಪಡಿಸುವ ತನಕ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಅರ್ಜುಣಗಿ ಗ್ರಾಮದ ಪಾಲಕರು ಆತಂಕ ವ್ಯಕ್ತ ಪಡಿಸಿ ಹೇಳಿದ್ದಾರೆ.