ಹಳಿಯಾಳ : ಪಟ್ಟಣದ ಮರಾಠಾ ಭವನದಲ್ಲಿ ತಾಲೂಕಿನ ವಾರಕರಿ ಸಮಸ್ತ ಸಂಘ ಸಂಸ್ಥೆಗಳು ಮತ್ತು ಸದ್ಭಕ್ತರಿಂದ ಗುರು ಪೂರ್ಣಿಮಾ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಸಂಜೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಗೋಸಾಯಿ ಮಠದ ಜಗದ್ಗುರು ಶ್ರೀ. ಶ್ರೀ.ಮಂಜುನಾಥ ಭಾರತೀ ಸ್ವಾಮೀಜಿಯವರು ನಮ್ಮ ದೇಶ ಆದರ್ಶ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಮೈಗೂಡಿಸಿಕೊಂಡಿರುವ ದೇಶ. ನಮ್ಮಲ್ಲಿ ಗುರುಗಳಿಗೆ ಅತ್ಯಂತ ಅಗ್ರಸ್ಥಾನವಿದ್ದು, ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಗುರುಗಳನ್ನು ಗೌರವಿಸುವ ಮೂಲಕ ಸಂಸ್ಕಾರಯುತವಾದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಗುರುಗಳಿಗೆ ಗೌರವ ಕೊಡುವವನು ಜೀವನದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯ. ನಮ್ಮೆಲ್ಲರ ಜೀವನದ ಯಶಸ್ಸಿನಲ್ಲಿ ಗುರುಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರು ಪ್ರತಿಯೊಬ್ಬರ ಬಾಳನ್ನು ಬೆಳಗಿಸುವ ಗುರುಗಳನ್ನು ಗೌರವಿಸುವುದು, ಪೂಜಿಸುವುದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವಾಗಿದೆ ಎಂದರು.ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು ಮೊದಲಾದವರು ಉಪಸ್ಥಿತರಿದ್ದರು.