ರಾಯಚೂರು (ಜು.8) : ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಬಂದರೂ ಸಹ ರಾಯಚೂರು ಜಿಲ್ಲೆಗೆ ಮಲತಾಯಿ ಧೋರಣೆ ಫಿಕ್ಸ್ ಎನ್ನುವು ಸಂಗತಿ ಮತ್ತೊಮ್ಮೆ ಸಾಬೀತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ 14ನೇ ಬಜೆಟ್ ರಾಯಚೂರು ಜಿಲ್ಲೆ ಪಾಲಿಗೆ ತೀವ್ರ ನಿರಾಸೆ ಮೂಡಿಸಿದೆ. ಇಡೀ ಬಜೆಟ್ನಲ್ಲಿ ರಾಯಚೂರಿಗೆ ನಿರ್ದಿಷ್ಟವಾದ ಯೋಜನೆ, ಅನುದಾನವನ್ನು ನೀಡದೆ ನಿರ್ಲಕ್ಷಿಸಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕಾಂಗ್ರೆಸ್ ಸರ್ಕಾರವೇ ಆರಂಭಿಸಿದ ಒಪೆಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಇದೀಗ ರಿಮ್ಸ್‌ನಡಿ ಸಿಲುಕಿ ರೋಗಪೀಡಿತಗೊಂಡಿದೆ. ಒಪೆಕ್ನ್ನು ಸ್ವಾಯತ್ತ ಮಾಡುವ ಬೇಡಿಕೆ ಹಾಗೆಯೇ ಉಳಿದಿದೆ. ಬೆಳೆಯುತ್ತಿರುವ ರಾಯಚೂರು ನಗರಕ್ಕೆ ರಿಂಗ್ ರಸ್ತೆ, ಇತ್ತೀಚೆಗೆ ಜಿಲ್ಲೆಗೆ ಏಮ್ಸ್ ನೀಡಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರು ಆ ಸಂಸ್ಥೆ ಸ್ಥಾಪನೆಗೆ ಅಗತ್ಯವಾದ ಸವಲತ್ತುಗಳ ಅಭಿವೃದ್ಧಿ ಕುರಿತಂತೆ ಬಜೆಟ್ನಲ್ಲಿ ಪ್ರಸ್ತಾಪಿಸಿಲ್ಲ.
ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ರೈತರಿಗೆ ಸಮರ್ಪಕ ನೀರನ್ನು ಹರಿಸುವ ವಿಚಾರವಾಗಿ ನವಲಿ ಬಳಿ ಜಲಾಶಯ ನಿರ್ಮಿಸುವ ವಿಚಾರವನ್ನು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದು ಕಾರ್ಯಾಗತಗೊಳಿಸುವ ಸುಳಿವು ನೀಡಿಲ್ಲ. ಇನ್ನು ಮಸ್ಕಿ ಉಪಚುನಾವಣೆಯಲ್ಲಿ ನೀಡಿದ ಭರವಸೆಯಂತೆ 9ಎ ಕಾಲುವೆ ಯೋಜನೆಯ ಹೆಸರು ಸಹ ಬಜೆಟ್ನಲ್ಲಿಲ್ಲ. ಹೊಸದಾಗಿ ಆರಂಭಗೊಂಡಿರುವ ರಾಯಚೂರು ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ಕೊಟ್ಟಿಲ್ಲ. ಎನ್ಆರ್ಬಿಸಿ ವಿಸ್ತರಣಾ ಯೋಜನೆ ಪೂರ್ಣ, ಮಂತ್ರಾಲಯಕ್ಕೆ ತೆರಳಲು ಬಿಚ್ಚಾಲಿ ಸಮೀಪ ಸೇತುವೆ ನಿರ್ಮಾಣದ ಕಾಮಗಾರಿಯ ಸಂಗತಿ ಪ್ರಸ್ತಾಪಗೊಂಡಿಲ್ಲ. ಜಿಲ್ಲಾಡಳಿತ ಭವನಕ್ಕೆ ಹೆಚ್ಚುವರಿ ಅನುದಾನದ ಅಗತ್ಯವಿದ್ದರು ಆ ಬಗ್ಗೆ ಎಲ್ಲಿಯೂ ವಿಷಯವಿಲ್ಲ. ಹೀಗೆ ಎಲ್ಲ ರಂಗಗಳಲ್ಲಿ ಅಭಿವೃದ್ಧಿಯ ಕಾಮಗಾರಿಗಳಿಗೆ ಅಗತ್ಯವಾದ ಅನುದಾನವನ್ನು ನೀಡುವಲ್ಲಿ ರಾಜ್ಯ ಸರ್ಕಾರದ ಬಜೆಟ್ ವಿಫಲಗೊಂಡಿದೆ.
ಬಜೆಟ್ನಲ್ಲಿ ರಾಯಚೂರಿಗೆ ಸಿಕ್ಕಿದ್ದೇನು?
– ರಾಯಚೂರು ತಾಲೂಕು ಕಲ್ಮಲಾ ಜಂಕ್ಷನ್‌ನಿಂದ ಸಿಂಧನೂರುವರೆಗೆ 78 ಕಿಮೀಗಳ ರಸ್ತೆ ಅಭಿವೃದ್ಧಿಗೆ 1696 ಕೋಟಿ
– ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ 4.71 ಕೋಟಿ
– ರಾಯಚೂರು ಕೋಟೆ ಅಭಿವೃದ್ಧಿ (ರಾಜ್ಯದ ವಿವಿಧ ಜಿಲ್ಲೆಗಳನ್ನೊಳಗೊಂಡಂತೆ)
– ಆಶಾಕಿರಣ ಕಾಯಕ್ರಮದಡಿಯಲ್ಲಿ ಕಣ್ಣಿನ ಶಿಬಿರ, ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳ ಕಾರ್ಯಕ್ರಮಕ್ಕೆ ರಾಯಚೂರು, ಚಿತ್ರದುರ್ಗ, ಉತ್ತರ ಕನ್ನಡ, ಮಂಡ್ಯ ಸೇರಿ 21 ಕೋಟಿ ರು.
ಇಬ್ಬರು ಸಚಿವರು, ನಾಲ್ಕು ಜನ ಶಾಸಕರ ವೈಫಲ್ಯ
ಹೊಸ ಸರ್ಕಾರದಿಂದ ರಾಯಚೂರು ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಯೋಜನೆ, ಕಾಮಗಾರಿಗಳ ಜಾರಿ ಮತ್ತು ವಿಶೇಷ ಅನುದಾನವನ್ನು ತರುವಲ್ಲಿ ಜನಪ್ರತಿನಿಧಿಗಳ ಸಂಪೂರ್ಣ ವೈಫಲ್ಯ ಕಂಡಿರುವುದು ಬಜೆಟ್ನಲ್ಲಿ ಎದ್ದು ಕಾಣುತ್ತಿದೆ.
ರಾಯಚೂರು ಜಿಲ್ಲೆಯವರಾದ ಸಚಿವ ಎನ್.ಎಸ್.ಬೋಸರಾಜು ಮತ್ತು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕಾಂಗ್ರೆಸ್ ಶಾಸಕರಾದ ಬಸನಗೌಡ ದದ್ದಲ್, ಜಿ.ಹಂಪಯ್ಯ ನಾಯಕ, ಆರ್.ಬಸನಗೌಡ ತುರ್ವಿಹಾಳ ಮತ್ತು ಹಂಪನಗೌಡ ಬಾದರ್ಲಿ ಅವರು ಜಿಲ್ಲೆಗೆ ಏನು ಬೇಕು?, ಇಲ್ಲಿನ ಜನಸಾಮಾನ್ಯರ ಬೇಡಿಕೆಗಳೇನು? ಎನ್ನುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಸಿಎಂ ಅವರಿಂದ ಅಗತ್ಯ ಅನುದಾನವನ್ನು ತರುವಲ್ಲಿ ವಿಭಲವಾಗಿದ್ದಾರೆಂಬುದು ಜನರ ಅಭಿಪ್ರಾಯವಾಗಿದೆ. ಜಿಲ್ಲೆ ಪಾಲಿಗೆ ಬಜೆಟ್ ಇದ್ದು ಇಲ್ಲದಂತಾಗಿದೆ ಎಂದು ಜನಸಾಮಾನ್ಯರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.