ಬೆಂಗಳೂರು (ಜು.08): ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದು ‘ಕಟ್ ಆ್ಯಂಡ್ ಪೇಸ್ಟ್’ ಬಜೆಟ್ ಆಗಿದ್ದು, ಅದು ಪ್ರಧಾನಿ ಮೋದಿ ಸರ್ಕಾರ ಮತ್ತು ಹಿಂದಿನ ಬಿಜೆಪಿ ಸರ್ಕಾರವನ್ನು ನಿಂದಿಸಲು ಮೀಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇಖಾನುದಾನ ಪಡೆದಿದ್ದರು. ಅದರ ಮುಂದುವರೆದ ಭಾಗವೇ ಈ ಬಜೆಟ್. ಇದು ನಮ್ಮ ಹಣಕಾಸು ಸಚಿವರು ದಾಖಲೆ ಸ್ಥಾಪಿಸಿಕೊಳ್ಳಲು ಮಂಡಿಸಿದ ದಾಖಲೆಯ ಬಜೆಟ್ ಅಷ್ಟೇ. ಇದನ್ನು ರಾಜ್ಯದ ಬಜೆಟ್ ಪುಸ್ತಕ ಎನ್ನುವುದಕ್ಕಿಂತ ಬಿಜೆಪಿಯ ನಿಂದನಾ ಪುಸ್ತಕ ಎಂದರೆ ಸರಿಯಾದೀತು.
ತಮ್ಮ ದೂರದೃಷ್ಟಿ, ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡುವ ಕುರಿತು ಹೇಳುವ ಬದಲು ಅನ್ಯರನ್ನು ತೆಗಳಲು ಬಜೆಟ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಟೀಕಾಪ್ರಹಾರ ನಡೆಸಿದರು. ಕೇಂದ್ರ ಸರ್ಕಾರ-ರಾಜ್ಯ ಸರ್ಕಾರಗಳ ನಡುವೆ ಸುಂದರ ಬಾಂಧವ್ಯ ಇರಬೇಕು. ಸಂಪನ್ಮೂಲ, ಅನುದಾನ, ಅಭಿವೃದ್ಧಿ ಇತ್ಯಾದಿ ವಿಷಯಗಳಲ್ಲಿ ತಿಕ್ಕಾಟ ಒಳ್ಳೆಯದಲ್ಲ. ಪ್ರತಿಬಾರಿ ಅವರನ್ನು ದೂಷಿಸಿದರೆ ರಾಜ್ಯಕ್ಕೆ ನಷ್ಟತಪ್ಪಿದ್ದಲ್ಲ. ಕೇಂದ್ರವನ್ನು ಇವರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದರಿಂದ ನಮಗೇ ಲಾಭ ಜಾಸ್ತಿ. ಅಂಥ ಸಾಮರಸ್ಯದ ಸಂದೇಶ ಸಾರದ ಇವರು, ‘ರಾಜ್ಯದ ಬಜೆಟ್ ಇಡೀ ದೇಶಕ್ಕೆ ಸಂದೇಶ ಕೊಡುವ ಬಜೆಟ್’ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ.
ಬಜೆಟ್ ಪುಸ್ತಕದ ಜತೆ ಕೇಂದ್ರದೊಂದಿಗೆ ಜಗಳಕ್ಕೆ ನಿಲ್ಲುವುದಾ ಇವರು ನೀಡುವ ಸಂದೇಶ? ಬಜೆಟ್ ಎಂದರೆ ಅದಕ್ಕೊಂದು ಘನತೆ ಇರುತ್ತದೆ. ಅದನ್ನು ಇವರು ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯಾಗಿದ್ದಾಗ ಬೊಮ್ಮಾಯಿ ಅವರು .77 ಸಾವಿರ ಕೋಟಿ ಸಾಲ ಮಾಡಿದ್ದರು. ಇವರು ಅದನ್ನು .85 ಸಾವಿರ ಕೋಟಿಗೆ ತೆಗೆದುಕೊಂಡು ಹೋಗಿದ್ದಾರೆ. ಒಂದೇ ವರ್ಷಕ್ಕೆ ಜನರ ಮೇಲೆ .85 ಸಾವಿರ ಕೋಟಿ ಸಾಲದ ಹೊರೆ ಹೊರೆಸುತ್ತಿದ್ದಾರೆ. ಇಷ್ಟೊಂದು ಸಾಲ ಯಾಕೆ ಮಾಡುತ್ತಿದ್ದೀರಿ? ಅದಕ್ಕೆ ಕಾರಣ ನೀಡಿ ಎಂದು ಆಗ್ರಹಿಸಿದರು.
ಹಿಂದಿನ ಬಜೆಟ್ ಯೋಜನೆಯ ಎಲ್ಲ ಲೆಕ್ಕಾಚಾರ ತೆಗೆದು .59 ಕೊಟಿ ವ್ಯತ್ಯಾಸ ಆಗಿರಬಹುದು ಅಷ್ಟೇ. ಆರೋಗ್ಯ, ಶಿಕ್ಷಣ ಕ್ಷೇತ್ರ ಪ್ರಮುಖವಾದುವು. ಅದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಿದೆ. ಅದನ್ನು ಜನರಿಗೆ ತಲುಪಿಸಲು ನಾವು ಎಡವುತ್ತಿದ್ದೇವೆ. ಮೂಲಭೂತವಾಗಿ ಜನರಿಗೆ ಏನು ಬೇಕೆನ್ನುವ ಬಗ್ಗೆ ಬಜೆಟ್ ಪೂರ್ಣವಾಗಿ ಎಡವಿದೆ. ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ರಾಜ್ಯದ ತೆರಿಗೆ ಇಲಾಖೆಗಳ ಯಾವುದೇ ಶ್ರಮ ಇಲ್ಲದೆ ಜನ ರಾಜ್ಯದ ಖಜಾನೆ ತುಂಬಿದ್ದಾರೆ. ಅದಕ್ಕಾಗಿ ಜನರನ್ನು ಅಭಿನಂದಿಸುತ್ತೇನೆ. ಕೋವಿಡ್ ಸಮಸ್ಯೆ ನಡುವೆಯೂ ಜನ ಹಣ ತುಂಬಿಸಿಕೊಟ್ಟಿದ್ದಾರೆ.`