ನೆಲಮಂಗಲ: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ, ಆನ್‌ಲೈನ್ ವಂಚನೆಯಂತಹ ಸಾಲು ಸಾಲು ಪ್ರಕರಣಗಳು ವರದಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಪೇ ಟಿಎಂ ಇಸ್ಟಾಲ್ ಮಾಡೋದಾಗಿ ಬೀದಿ ಬದಿ ವ್ಯಾಪಾರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೀದಿ ಬದಿ ವ್ಯಾಪಾರಿ ಧನಲಕ್ಷ್ಮಮ್ಮ ಎನ್ನುವವರ ಬ್ಯಾಂಕ್ ಖಾತೆಯಲ್ಲಿದ್ದ 22 ಸಾವಿರ ನಗದನ್ನು ದೋಚಿದ್ದಾರೆ.
ನಾಗರಹೊಳೆ ನಗರ ಬಡಾವಣೆಯಲ್ಲಿ ವ್ಯಾಪಾರಿಗೆ ಮೊಬೈಲ್‌ಯಲ್ಲಿ ಪೇಟಿಎಂ ಹಾಕಿಕೊಡುವುದಾಗಿ ಆರೋಪಿಗಳು ಹೇಳಿದ್ದು ಮೊಬೈಲ್ ಪಡೆದು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಡಿಯಲ್ಲಿ ದರೋಡೆ ಆಗಿದೆ, ಸಹಾಯ ಮಾಡಿ ಎಂದು ವಂಚನೆ ಮಾಡಿರುವ ಮತ್ತೊಂದು ಪ್ರಕರಣ ದಾಖಲಾಗಿದೆ. ವಿದ್ಯಮಾನನಗರದ ಉದ್ಯಮಿ ಶ್ರೀನಿವಾಸ್‌ಗೆ ಕರೆ ಮಾಡಿರುವ ಆರೋಪಿಗಳು ಉದ್ಯಮಿಯ ಉದ್ಯಮಕ್ಕೆ ಪೂರೈಕದಾರ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ನಾವು ಶಿರಡಿಯಲ್ಲಿ ಇದ್ದೇವೆ, ಇಲ್ಲಿ ನಮ್ಮ ಕ್ಯಾಬ್ ಚಾಲಕನಿಂದ ದರೋಡೆ ಆಗಿದೆ ಇಲ್ಲಿಂದ ವಾಪಸ್ ಬರಲು 70 ಸಾವಿರ ಸಹಾಯ ಮಾಡಿ ಎಂದು ನಂಬಿಸಿದ್ದಾರೆ. ಹೀಗಾಗಿ ವಿವಿಧ ಖಾತೆಗಳಿಂದ ಹಣ ವರ್ಗಾವಣೆ ಮಾಡಿದ ಬಳಿಕ ಇದು ವಂಚನೆ ಎಂದು ಬೆಳಕಿಗೆ ಬಂದಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಅಡ್ಡಗಟ್ಟಿ ಉದ್ಯಮಿಯ ಮೊಬೈಲ್ ದರೋಡೆ ಮಾಡಿದ್ದಾರೆ, ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ಜಂಕ್ಷನ್‌ನಲ್ಲಿ ಘಟನೆ ನಡೆದಿದ್ದು ಮೌಸೀನ್ ಅನೀಫ್ ಎಂಬುವರ ಐಫೋನ್ ದರೋಡೆ ಮಾಡಿದ್ದಾರೆ. ಸ್ನೇಹಿತನಂತೆ ಕರೆ ಮಾಡಿ ಕಾರು ನಿಲ್ಲಿಸಲು ಹೇಳಿದ ಆರೋಪಿಗಳು ಕಾರು ನಿಲ್ಲಿಸಿದ ಬಳಿಕ ಅಡ್ಡಗಟ್ಟಲು ಪ್ರಯತ್ನಿಸಿದ್ದಾರೆ, ವಿರೋಧ ವ್ಯಕ್ತಪಡಿಸಿ ಮುಂದೆ ಹೋಗುತ್ತಿದ್ದಂತೆ ಗಾಜು ಹೊಡೆದು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.