ಬೆಂಗಳೂರು: 2023-24ನೇ ಸಾಲಿನ ಬಹುನಿರೀಕ್ಷಿತ ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯನವರು(Siddaramaiah) ಇಂದು(ಜುಲೈ 07) ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ(Karnataka Budget 2023) ನಗರಾಭಿವೃದ್ಧಿ ಇಲಾಖೆ & ನೀರಾವರಿ ಇಲಾಖೆಗೆ(Irrigation Department) 19,044 ಕೋಟಿ ಮೀಸಲಿಡಲಾಗಿದ್ದು ನೀರಾವರಿ ಇಲಾಖೆಗೆ ಹೆಚ್ಚಿದ ಆಧ್ಯತೆ ನೀಡಿದ್ದಾರೆ.
ಹಿಂದಿನ ಸರ್ಕಾರದ ನೀರಾವರಿ ಯೋಜನೆ ಕೈಬಿಡಲು ನೂತನ ಸರ್ಕಾರ ನಿರ್ಧಾರ ಮಾಡಿದ್ದು 19 ಕೆರೆ ತುಂಬಿಸುವ ಯೋಜನೆಗೆ 770 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಯಾದಗರಿ ಸೇರಿ 15 ಜಿಲ್ಲೆಯ 99 ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೂ ಎತ್ತಿನಹೊಳೆ ಯೋಜನೆಗೆ ಪರಿಷ್ಕೃತ ಮೊತ್ತ 22,252 ಕೋಟಿ ಮೀಸಲಿಡಲಾಗಿದೆ. ಮೇಕೆದಾಟು ಯೋಜನೆಗೆ ಭೂಸ್ವಾಧಿನ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧಾರ ಮಾಡಲಾಗಿದ್ದು ಮಹದಾಯಿ ಯೋಜನೆ ಕಾಮಗಾರಿಗೆ ಮರು ಚಾಲನೆ ನೀಡಲು ನಿರ್ಧರಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆೆ ಕೇಂದ್ರ ಸರ್ಕಾರ ಮೀಸಲಿಟ್ಟ 5,300 ಕೋಟಿ ರೂ. ಬಿಡುಗಡೆಗೆ ಮನವಿ ಮಾಡಲಾಗಿದೆ. ತುಂಗಾಭದ್ರಾ ಜಲಾಶಯದ ಹೂಳೆತ್ತಲು ಯೋಜನೆ ರೂಪಿಸಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದರು.
ಮತ್ತು 2ನೇ ಹಂತ ವಿಸ್ತರಣೆ ಮಾಡಲಾಗುತ್ತಿದ್ದು ಶೀಘ್ರ ಚಾಲನೆ ನೀಡಲಾಗುತ್ತೆ. ಇದರಿಂದ 130 ಟಿಎಂಸಿ ನೀರು ಬಳಕೆಗೆ ಅನುಕೂಲವಾಗಲಿದೆ. ಸನ್ನತಿ ಏತ ನೀರಾವರಿ ಯೋಜನೆಗೆ ಕೇಂದ್ರದಿಂದ ಸಹಾಯಧನ ಪಡೆಯಲು ರಾಜ್ಯಸರ್ಕಾರ ನಿರ್ಧರಿಸಿದೆ. ಟಿಬಿ ಡ್ಯಾಮ್ ಹೂಳೆತ್ತಲು ಯೋಜನೆ ಅನುಷ್ಠಾನ, ಪರ್ಯಾಯವಾಗಿ ಸಮತೋಲನ ಡ್ಯಾಮ್ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ನವಿಲೆ ಬಳಿ ಜಲಾಶಯ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು ನೆರೆಯ ಆಂಧ್ರ & ತೆಲಂಗಾಣ ಜೊತೆ ಚರ್ಚಿಸಲು ಸಮಿತಿ ರಚನೆ ಮಾಡಲಾಗಿದೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ 296 ಕೆರೆ ತುಂಬಿಸಲು ನಿರ್ಧಾರ
ಕೆಸಿ ವ್ಯಾಲಿ ಮತ್ತು ಹೆಚ್ಎನ್ ವ್ಯಾಲಿ ಯೋಜನೆಗಳಿಗೆ ಅನುದಾನ ನೀಡಲಾಗುತ್ತೆ. ಸಂಸ್ಕರಿಸಿದ ನೀರನ್ನು ಕೆರೆಗಳನ್ನು ತುಂಬಲು ನಿರ್ಧಾರ ಮಾಡಲಾಗಿದೆ. ಏತ ನೀರಾವರಿ ಯೋಜನೆ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ 296 ಕೆರೆ ತುಂಬಿಸಲು ನಿರ್ಧಾರ ಮಾಡಲಾಗಿದ್ದು ಕೆರೆಗಳನ್ನು ತುಂಬಿಸುವ ಯೋಜನೆಗೆ 529 ಕೋಟಿ ಹಣ ಮೀಸಲಿಡಲಾಗಿದೆ ಎಂದರು.
ಇನ್ನು ಜಲಜೀವನ್ ಮಿಷನ್ ಯೋಜನೆಯ ಲೋಪ ಪತ್ತೆ ಹಚ್ಚಲು ಬಾಹ್ಯ ಸಂಸ್ಥೆಯಿಂದ ತನಿಖೆ ನಡೆಸುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪ ಮಾಡಲಾಯಿತು. ಯೋಜನೆ ಜಾರಿಯಲ್ಲಿನ ಲೋಪದೋಷಗಳ ಬಗ್ಗೆ ತನಿಖೆಗೆ ನಿರ್ಧಾರ ಮಾಡಲಾಗಿದ್ದು ಲೋಪದೋಷ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದರು.