ನೆಲಮಂಗಲ: ನಾಡ ಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಮಸಿ ಬಳಿಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಸರ್ಕಲ್ನ ರಾಜ್ಯ ಒಕ್ಕಲಿಗರ ವೇದಿಕೆಯ ಬೋರ್ಡ್ನಲ್ಲಿದ್ದ ಕೆಂಪೇಗೌಡರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಈ ಹಿನ್ನೆಲೆ ಕಿಡಿಗೇಡಿಗಳನ್ನು ಬಂಧಿಸುವಂತೆ ಪ್ರತಿಭಟನೆ(Protest) ನಡೆಸಲಾಗುತ್ತಿದೆ.
ಕುಣಿಗಲ್ ಬೈಪಾಸ್‌ನಲ್ಲಿ ಅಳವಡಿಸಲಾಗಿದ್ದ ರಾಜ್ಯ ಒಕ್ಕಲಿಗ ಜಾಗೃತಿ ಸಂಘದ ಬೋರ್ಡ್‌ನಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಚಿತ್ರಿಸಲಾಗಿತ್ತು. ಆದರೆ ಕಿಡಿಗೇಡಿಗಳು ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ಹೀಗಾಗಿ ಭಾವಚಿತ್ರಕ್ಕೆ ಮಸಿ ಬಳಿದವರನ್ನು ಬಂಧಿಸುವಂತೆ ಕೆಂಪೇಗೌಡ ಹೋರಾಟ ಬಳಗದವರಿಂದ ಪ್ರತಿಭಟನೆ ನಡೆಯುತ್ತಿದೆ. ನೂರಾರು ಜನ ಕೆಂಪೇಗೌಡ ಬಳಗದ ಹೋರಾಟಗಾರರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇನ್ನು ಕೆಲಕಾಲ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಮಾನವ ಸರಪಳಿ ರಚಿಸಿ ಮಸಿ ಬಳಿದವರ ಬಂಧನಕ್ಕೆ ಆಗ್ರಹಿಸಲಾಗಿದೆ. ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಸದ್ಯ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ನಗರ ಪೊಲೀಸರು ಪ್ರತಿಭಟನಾಕಾರರ ಮನಹೊಲಿಸಿ, ಆದಷ್ಟು ಬೇಗ ಈ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.